KSRTC ನೌಕರರ ವೇತನ ಪರಿಷ್ಕರಣೆ, ಬಾಕಿ ಪಾವತಿಗೂ ಸರ್ಕಾರ ಒಪ್ಪಿಗೆ

0
KSRTC- Ramalinga Reddy

ಬೆಂಗಳೂರು: ಮುಷ್ಕರದ ಎಚ್ಚರಿಕೆಯ ಹಿನ್ನೆಲೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಸಾರಿಗೆ ನೌಕರರ ಪ್ರಮುಖ ಬೇಡಿಕೆಯಾಗಿದ್ದ ವೇತನ ಬಾಕಿ ಪಾವತಿಗೆ ಕ್ರಮ ಕೈಗೊಂಡಿದೆ.

ಸಾರಿಗೆ ನೌಕರರಿಗೆ ಒಟ್ಟು 38 ತಿಂಗಳ ವೇತನ ಹಿಂಬಾಕಿ ಪಾವತಿಸ ಬೇಕಿರುವುದರಿಂದ, ಪ್ರಥಮ ಹಂತದಲ್ಲಿ 26 ತಿಂಗಳ ಅರಿಯರ್ಸ್‌ ಪಾವತಿಸಲು ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. 1-1-2021ರಿಂದ 28-03-2023ರವರೆಗೆ ಬಾಕಿ ಇರುವ 26 ತಿಂಗಳ ಮೊತ್ತವನ್ನು ನೌಕರರಿಗೆ ನೀಡಲಾಗುತ್ತದೆ.

ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ KSRTC, BMTC, NWKRTC ಹಾಗೂ KKRTC ನೌಕರರು ವೇತನ ಬಾಕಿ ಪಾವತಿಗೆ ಒತ್ತಾಯಿಸುತ್ತಿದ್ದರು.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಈ ನಿರ್ಧಾರ ಪ್ರಕಟಿಸಲಾಗಿದೆ. ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚನೆ ನಡೆಸಿ, ಹಂತ ಹಂತವಾಗಿ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಇದೇ ವೇಳೆ, 2025ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಸಾರಿಗೆ ನೌಕರರ ವೇತನ ಪರಿಷ್ಕರಣೆಗೂ ಸರ್ಕಾರ ತತ್ವತಃ ಒಪ್ಪಿಗೆ ನೀಡಿದೆ. ವೇತನದಲ್ಲಿ ಏರಿಕೆಯ ಪ್ರಮಾಣವನ್ನು ಸಾರಿಗೆ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.

Leave a Reply

Your email address will not be published. Required fields are marked *

You may have missed