ಇದು ಕರ್ನಾಟಕದ ಕಾಶ್ಮೀರ; ಕೋಟಿ ಕೊಟ್ಟರು ಸಿಗದು ಈ ಅದ್ಭುತ ಅನುಭವ
ಅದೊಂಥರಾ ಕರ್ನಾಟಕದ ಕಾಶ್ಮೀರ.. ವರ್ಷದ 12 ತಿಂಗಳೂ ಇಲ್ಲಿನ ಮಂಜಿನ ಮಳೆಯದ್ದೇ ಕಾರುಬಾರು. ಮೈಥರಗುಟ್ಟುವ ಚಳಿ, ಕಚಗುಳಿ ಇಡುವ ಕುಳಿರ್ಗಾಳಿ ಎಂಥ ಸೋತ ಮನಸುಗಳಿಗೂ ನವಚೈತನ್ಯ ತುಂಬುವ ವಾತಾವರಣ. ಅಂತಹ ಅದ್ಬುತ ತಾಣಗಳಲ್ಲಿ ಹಿಮವತ್ ಗೋಪಾಲ ಸ್ವಾಮಿ ಬೆಟ್ಟವೂ ಒಂದು. ಕರ್ನಾಟಕದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಈ ಅತ್ಯದ್ಬುತ ತಾಣ, ಪ್ರವಾಸಿಗರನ್ನು ಕೈಬೀಸಿಕರೆಯುತ್ತಿದೆ.
ಚಾಮರಾಜನಗರ ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನದೊಳಗೆ ಇರುವ ಈ ಅತ್ಯುದ್ಭುತ ತಾಣ, ಮೈಸೂರಿನಿಂದ ಊಟಿಗೆ ಸಾಗುವ ಮಾರ್ಗ ಮದ್ಯೆದಲ್ಲಿ 60ಕಿಲೋಮೀಟರ್ ದೂರ ಸಾಗಿದರೆ ಸಿಗುವ ಗುಂಡ್ಲುಪೇಟೆಯಿಂದ 16 ಕಿಲೋಮೀಟರ್ ದೂರದಲ್ಲಿದೆ.
ಸಮುದ್ರ ಮಟ್ಟದಿಂದ ಸುಮಾರು 4800 ಅಡಿ. ಎತ್ತರದಲ್ಲಿರುವ ಈ ತಾಣ ವರ್ಷದ ಎಲ್ಲಾಕಾಲದಲ್ಲೂ ತಂಪಾದ ಹವಾಗುಣವಿರುವ ಪ್ರದೇಶ . ಮಂಜಿನ ಜೊತೆಗೆ ತುಂತುರು ಹನಿಗಳ ಮಧ್ಯೆ ನಡೆದು ಸಾಗುತ್ತಿದ್ದರೆ ಮನಸ್ಸು ಆಹ್ಲಾದಗೊಳ್ಳುತ್ತದೆ. ಆನೆ, ಕರಡಿ, ಕಾಡೆಮ್ಮೆ,ಸಾರಂಗಗಳ ಹಿಂಡು ನೋಡುತ್ತಿದ್ದರೆ ಮೈಮನಸು ಪುಳಕಗೊಳ್ಳುತ್ತದೆ.
ಬೆಟ್ಟದ ಮೇಲೆ ನಿಂತು ಪ್ರಕೃತಿಯ ಸೌಂದರ್ಯದೊಂದಿಗೆ ಮಿಳಿತವಾಗುತ್ತಿದ್ದಂತೆ ನಮ್ಮನ್ನು ಭಕ್ತಿಯ ಭಾವ ಆವರಿಸಿಕೊಂಡು ಬಿಡುತ್ತದೆ. ನಮಗೆ ಗೊತ್ತಿಲ್ಲದಂತೆ ನಮ್ಮ ಕಾಲು ಬೆಟ್ಟದಲ್ಲಿರುವ ಹಿಮವತ್ ಗೋಪಾಲಸ್ವಾಮಿ ದೇವಾಲಕ್ಕೆ ಎಳೆದೊಯ್ಯುತ್ತದೆ. ಗರ್ಭಗುಡಿಯಲ್ಲಿ ನಾಟ್ಯ ಭಂಗಿಯಲ್ಲಿ ಕೊಳಲು ನುಡಿಸುತ್ತಾ ಮಂದಸ್ಮಿತವಾಗಿ ನಿಂತಿರುವ ಕೃಷ್ಣನ ಮೂರ್ತಿ ನಿಜಕ್ಕೂ ಅದ್ಬುತವಾಗಿದ್ದು, ಕೃಷ್ಣ ನಮಗೆ ಸ್ವಾಗತ ನೀಡುತ್ತಿದ್ದಾನೇನೋ ಎಂಬ ಭಾವ ನಮ್ಮನ್ನು ಆವರಿಸಿಕೊಂಡು ಬಿಡುತ್ತದೆ.
ದೇವಾಲಯದ ಗರ್ಭಗುಡಿಯ ಬಾಗಿಲಿನ ಮೇಲ್ಭಾಗದಿಂದ ನಿರಂತರವಾಗಿ ಹಿಮದನೀರು ಜಿನುಗುತ್ತಿರುತ್ತದೆ. ಆದ್ದರಿಂದಲೇ ಹಿಮವದ್ಗೋಪಾಲಸ್ವಾಮಿ ಎಂಬ ಹೆಸರು ಇಲ್ಲಿಯ ದೇವನಿಗೆ. 700 ವರ್ಷಗಳ ಇತಿಹಾಸವಿರುವ ಈ ಐತಿಹಾಸಿಕ ಬೆಟ್ಟದ ಮೇಲೆ ಹೊಯ್ಸಳ ದೊರೆ ಚೋಳ ಬಲ್ಲಾಳ ದೇವಾಲಯ ಕಟ್ಟಿದ. ಇದನ್ನು ಮೈಸೂರಿನ ಒಡೆಯರ ಕಾಲದಲ್ಲಿ ಇನ್ನಷ್ಟು ಸುಂದರಗೊಳಿಸಲಾಯಿತಂತೆ. ಇನ್ನೂ ವಿಶೇಷವೆಂದರೆ ವೇಣುಗೋಪಾಲ ಸ್ವಾಮಿ ಬೆಟ್ಟವನ್ನು ಅಷ್ಟದಳಗಳಂತೆ ತ್ರಯಂಬಕಾದ್ರಿ, ನೀಲಾದ್ರಿ,ಮಂಗಳಾದ್ರಿ, ಶಂಖರಾದ್ರಿಗಿರಿ,ಹಂಸಾದ್ರಿ,ಗರುಡಾದ್ರಿ, ಪಲ್ಲವಾದಿ,ಮಲ್ಲಿಕಾರ್ಜುನಗಿರಿ, ಪರ್ವತಗಳು ಸುತ್ತುವರೆದಿದ್ದು ಇವುಗಳನ್ನು ಒಟ್ಟಾಗಿ ಕಮಲಾಚಲ ಎಂದು ಕರೆಯಲಾಗುತ್ತದೆ. ಬೆಟ್ಟದಲ್ಲಿ ಸುಮಾರು 77 ಕೊಳಗಳಿವೆ ಎನ್ನುತ್ತಾರೆ ಹಿರಿಯರು. ಮಕ್ಕಳಿಲ್ಲದ ದಂಪತಿ ಈ ತೊಟ್ಲುತೀರ್ಥದಲ್ಲಿ ಸ್ನಾನಮಾಡಿದರೆ ಮಕ್ಕಳಾಗುತ್ತದೆ ಎನ್ನುವ ನಂಬಿಕೆಯೂ ಇದೆ.