ಗದಗ ಜಿಲ್ಲೆಯ ಮಾಗಡಿ ಕೆರೆಯಲ್ಲಿ ವಿದೇಶಿ ಬಾನಾಡಿಗಳ ಕಲರವ
ಬಯಲು ಸಿಮೇಯ ಪ್ರದೇಶದಲ್ಲೊಂದು ವಿಶಾಲವಾದ ಕೆರೆ. ಕೆರೆಯ ಸುತ್ತಮುತ್ತಲೂ ಬೆಚ್ಚಗಿನ ಹವೆ. ಈ ಹವೆಯನ್ನು ಸವೆದು ವಂಶ ವೃದ್ಧಿಸಿಕೊಂಡು ಹೋಗಲು ಬಣ್ಣ ಬಣ್ಣದ ವಿದೇಶಿ ಹಕ್ಕಿಗಳು ಸಾಲು ಸಾಲು. ಈ ಸಾಲು ಸಾಲು ಹಕ್ಕಿಗಳನ್ನು ನೋಡುವುದೇ ಒಂದು ಅಪರೂಪದ ಕ್ಷಣ. ಲಡಾಕ್, ಟಿಬೇಟ್, ರಷ್ಯಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ವಿದೇಶದ ವಿವಿಧೆಡೆಯಿಂದ ಒಲಸೆ ಬಂದಿರುವ ಬಣ್ಣ ಬಣ್ಣದ ಅಪರೂಪದ ವಿವಿಧ ಜಾತಿಯ ಪಕ್ಷಿಗಳ ಒಡನಾಟದಿಂದ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಕೆರೆ ಪಕ್ಷಿಧಾಮವಾಗಿ ಪಕ್ಷಿಗಳ ಪ್ರೀಯರ ಪ್ರವಾಸಿ ತಾಣವಾಗಿದೆ.
ಕಾಶ್ಮಿರದ ಲಡಾಕ್, ಟಿಬೇಟ್ನ ಪ್ರದೇಶಗಳಲ್ಲಿ ಡಿಸೆಂಬರ್ – ಮಾರ್ಚ್ ನಡುವೆ ಅತಿ ಹೆಚ್ಚು ಚಳಿಯಿಂದಾಗಿ ಆ ಭಾಗದ ಕೆರೆ, ಸರೋವರ ಅತಿ ಶೀತಲದಿಂದ ಹೆಪ್ಪುಗಟ್ಟುವ ಹಿನ್ನಲೆಯಲ್ಲಿ ಆ ಪ್ರದೇಶದ ಪಕ್ಷಿಗಳ ಪರಿವಾರವೇ ಇಲ್ಲಿಗೆ ವಲಸೆ ಬರುತ್ತವೆ. ಇಲ್ಲಿನ ಬೆಚ್ಚಗಿನ ಹವೆಯನ್ನು ಆರಿಸಿಕೊಂಡು ಸಾವಿರಾರೂ ಕಿಲೋ ಮೀಟರ್ ದೂರದಿಂದ ಬಂದು ಎಪ್ರೀಲ್ ಅಥವಾ ಮೇ ಬಳಿಕ ಮರಳಿ ಗೂಡಿಗೆ ಹೋಗುವವು. ಈ ಅವಧಿಯಲ್ಲಿ ಪರಿಸರ ಪ್ರೇಮಿಗಳು, ಪಕ್ಷಿ ಪ್ರಿಯರಿಗೆ ಇದೊಂದು ಹಬ್ಬದ ವಾತಾವರಣವೇ ಸರಿ ಎನ್ನಬಹುದು.
ವಿದೇಶಿ ಪಕ್ಷಿಗಳ ವಲಸೆಯಿಂದಾಗಿ ಕರ್ನಾಟಕದ ಪಕ್ಷಿಧಾಮಗಳಾದ ರಂಗನತಿಟ್ಟು ಹಾಗೂ ಕೊಕ್ಕರೆ ಬೆಳ್ಳೂರುಗಳ ಸಾಲಿಗೆ ಸೇರಲಿರುವ ಮಾಗಡಿ ಗ್ರಾಮ ಗದಗನಿಂದ 26 ಕಿಲೋ ಮೀಟರ್ ಲಕ್ಷ್ಮೇಶ್ವರದಿಂದ 11 ಕಿಲೋ ಮೀಟರ್ ಹಾಗೂ ಶಿರಹಟ್ಟಿಯಿಂದ 8 ಕಿಲೋ ಮೀಟರ್ ದೂರದಲ್ಲಿದೆ. ಸುಮಾರು 134 ಎಕರೆ 15 ಗುಂಟೆಯ ವಿಸ್ತಿರ್ಣ ಹೊಂದಿರುವ ಬೃಹತ್ ಕೆರೆ 98 ಎಕರೆ 3 ಗುಂಟೆ ಕ್ಷೇತ್ರ ಮಾಗಡಿ ಗ್ರಾಮಕ್ಕೆ ಸೇರಿದ್ದರೆ, ಇನ್ನೂಳಿದ 30 ಎಕರೆ 12 ಗುಂಟೆ ಕ್ಷೇತ್ರ ಮಾಗಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಹೊಳಲಾಪುರ ಗ್ರಾಮಕ್ಕೆ ಸೇರಿದೆ.
ಭಾರತದ ಬಾತುಕೋಳಿಗಿಂತ ಚಿಕ್ಕ ಗಾತ್ರದಲ್ಲಿರುವ ಹಂಸಗಳ ಜಾತಿಗೆ ಸೇರಿರುವ ಈ ಪಕ್ಷಿಗಳು ಹೊಟ್ಟೆ ಭಾಗದಲ್ಲಿ ಬಿಳಿ ಬಣ್ಣ, ಬೂದು ಬಣ್ಣದ ರೆಕ್ಕೆಗಳು, ಕೇಸರಿ ಬಣ್ಣದ ಕಾಲುಗಳನ್ನು ಹೊಂದಿವೆ. ದೇಶ ವಿದೇಶಗಳ ಪಕ್ಷಿಗಳು ಇಲ್ಲಿ ಚಳಿಗಾಲ ಮುಗಿಯುವರೆಗೆ ಇದ್ದು, ತಮ್ಮ ವಂಶಾವಳಿ ವೃದ್ಧಿಸಿಕೊಂಡು ಮರಳಿ ತಮ್ಮ ದೇಶಗಳಿಗೆ ಹೋಗುತ್ತವೆ. ಬಾರ್ ಹೆಡ್ಡ್ ಗೊಜ್, ಪೆಂಟೆಡ್ ಸ್ಪಾರ್ಕ್, ಬ್ರಾಹ್ಮಿಣಿ ಡಕ್, ವೈಟ್ ಇಬಿಸ್, ಬ್ಲಾಕ್ ಇಬಿಸ್, ಬ್ಲಾಕ್ ನೆಕ್ಕಡ್ಸ್ಟಾರ್ಕ್, ವೈಟ್ ನೆಕ್ಕಡ್ ಸ್ಪಾರ್ಕ್, ಸ್ಕಾಪ್ಡಕ್, ಲಿಟಲ್ ಕಾರ್ಮೊರೆಂಟ್ ಸ್ಪಾಟಬಿಲ್, ಗೇಡಕ್ ಕೂಟ್ ಸೇರಿದಂತೆ ಇನ್ನೂ ಹಲವಾರು ಜಾತಿಗೆ ಸೇರಿದ ಸಾವಿರಾರು ವಿದೇಶಿ ಪಕ್ಷಿಗಳು ಮಾಗಡಿ ಕೆರೆಗೆ ಆಗಮಿಸಿ ವಿಶ್ರಮಿಸುತ್ತವೆ.
ಅಂಡಮಾನ್, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ಬಾಂಗ್ಲಾ ದೇಶಗಳಲ್ಲಿ ಹೆಚ್ಚಾಗಿ ಕಾಣಸಿಗುವ ಈ ಪಕ್ಷಿಗಳು ಕೆರೆಯಲ್ಲಿ ಸಿಗುವ ಚಿಕ್ಕ ಹುಳು, ಕಪ್ಪೆ, ಸಣ್ಣ ಮೀನು, ಸೇರಿದಂತೆ ಭತ್ತ, ಶೇಂಗಾ, ಕಡಲೆ ಮುಂತಾದ ಆಹಾರವನ್ನು ಸೇವಿಸುತ್ತವೆ. ಇಲ್ಲಿ ಬರುವ ಸಾಕಷ್ಟು ಹಕ್ಕಿಗಳು ಸಸ್ಯಹಾರಿಯೇ ಆಗಿರುವದರಿಂದ ಹೊಲದಲ್ಲಿ ಬೆಳೆದ ಬೆಳೆಗಳನ್ನೇ ಅವಲಂಬಿಸಿವೆ. ಹಾಗಂತ ಇಲ್ಲಿನ ರೈತರಿಗೆ ನಷ್ಟ ಎಂಬುವ ಹಾಗಿಲ್ಲ. ಅರಣ್ಯ ಇಲಾಖೆಯ ಪಕ್ಷಿಗಳಿಗಾಗಿ ಕೆರೆಯ ಸುತ್ತಮುತ್ತಲು ತಿನ್ನುವ ಆಹಾರವನ್ನು ಬೆಳೆದು ಈ ಭಾಗದ ರೈತರು ಪಕ್ಷಿಗಳಿಗೆ ಆಶ್ರಯದಾತರಾಗಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ 8:30ರವರೆಗೆ ವಿಮಾನದಂತೆ ಕೆರೆಯಲ್ಲಿ ಬಂದಿಳಿಯುವ ಈ ವಿದೇಶ ಬಾನಾಡಿಗಳು, ಸಂಜೆವರೆಗೆ ವಿಶ್ರಾಂತಿ ತೆಗೆದುಕೊಂಡು ಸಂಜೆ 6ಕ್ಕೆ ತಂಡೋಪ ತಂಡವಾಗಿ ಕಪ್ಪತ್ತಗುಡ್ಡದ ತಪ್ಪಲಿನ ಬಯಲು ಸಿಮೇಯ ಬೆಚ್ಚನೆಯ ಪ್ರದೇಶಕ್ಕೆ ಹಾರಿ ಹೋಗುತ್ತವೆ. ಮರಳಿ ಇವುಗಳ ದರ್ಶನ ಮರುದಿನ ಚುಮು ಚುಮು ಮುಂಜಾನೆಯೇ. ಬೆಳಗ್ಗೆ ಬಂದಿಳಿಯುವ ಹಾಗೂ ಸಂಜೆ ಕೆರೆಯಿಂದ ಹಾರುವ ಹಕ್ಕಿಗಳನ್ನು ನೋಡುವುದೇ ಒಂದು ಆಕರ್ಷಣಿಯ ಕ್ಷಣ ಎಂಬುದು ಇಲ್ಲಿನ ಗ್ರಾಮಸ್ಥರು ಅಭಿಪ್ರಾಯ.
ಅರಣ್ಯಾಧಿಕಾರಿಗಳು ಪಕ್ಷಿಗಳಿಗಾಗಿ ಕೆರೆಯಲ್ಲಿ ದಿಬ್ಬ ನಿರ್ಮಿಸಿದ್ದಾರೆ. ಇಲ್ಲಿಗೆ ಬರುವ ಪ್ರವಾಸಿಗರ ಮಾಹಿತಿಗಾಗಿ ವಿದೇಶಿ ಪಕ್ಷಿಗಳ ಮಾಹಿತಿಯ ಫಲಕ ಹಾಕಿದ್ದು, ಸದ್ಯ ಕೆರೆಯ ನಾಲ್ಕು ದಿಕ್ಕಿನಲ್ಲಿ ದುರ್ಬಿನು ಅಳವಡಿಕೆ ಮಾಡಲಾಗಿದೆ. ಡಿಸೆಂಬರ್ ತಿಂಗಳಿನಿಂದ ಮಾರ್ಚ ಅಂತ್ಯದವರೆಗೆ ಮಾಗಡಿ ಕೆರೆಗೆ ಆಗಮಿಸುವ ಈ ವಿದೇಶಿ ಬಾನಾಡಿಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆಯನ್ನು ಇಟ್ಟಿದೆ. ಮಾಗಡಿ ಕೆರೆಯನ್ನು ಸಂರಕ್ಷಿತ ಅರಣ್ಯ ಪ್ರದೇಶವೆಂದು ಘೋಷಿಸಿ ಮಾಗಡಿ ಕೆರೆಯನ್ನು ಮಾದರಿ ಪಕ್ಷಿಧಾಮವನ್ನಾಗಿ ಮಾಡಲು 2 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ.
ಮಾಗಡಿ ಕೆರೆಯ ಸುತ್ತಮುತ್ತಲು ತಂತಿ ಬೇಲಿಯನ್ನು ಹಾಕುವುದರ ಮುಖಾಂತರ ಕೆರೆಯ ಸುತ್ತಮುತ್ತಲು ಯಾವುದೇ ರೀತಿಯ ಶೌಚ್ಯತೆ ಹರಡದಂತೆ ನೋಡಿಕೊಂಡು ಪಕ್ಷಿಗಳ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲಕರ ವಾತಾವರಣ ಕಲ್ಪಿಸುವುದರ ಮೂಲಕ ರಾಜ್ಯದಲ್ಲಿಯೇ ಮಾದರಿ ಪಕ್ಷಿಧಾಮವನ್ನಾಗಿ ಮಾಡಲು ಸರ್ಕಾರ ಮುಂದಾಗಿರುವುದು ಸಂತಸದ ವಿಷಯ.
ವಿದೇಶಿ ಪಕ್ಷಿಗಳ ವೀಕ್ಷಣೆಗೆ ಪಕ್ಷಿ ಪ್ರೇಮಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಕೆರೆಯು ಬತ್ತಿದರೆ, ವಿದೇಶಿ ಪಕ್ಷಿಗಳು ಬರುವುದಿಲ್ಲ. ಜಿಲ್ಲೆಯಲ್ಲಿ ಬರಗಾಲ ಬಿದ್ದಿದ್ದರಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಆದರೂ ಸಹಿತ ಈ ಬಾರಿ ವಿದೇಶಿ ಬಾನಾಡಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಪಕ್ಷಿಗಳನ್ನು ವೀಕ್ಷಿಸಲು ಆಗಮಿಸುತ್ತಿದ್ದು, ಅವರಿಗಾಗಿ ಜಿಲ್ಲಾಡಳಿತ ಅಗತ್ಯವಿರುವ ಸಾರಿಗೆ, ವಸತಿ, ಗೈಡ್ಸ್ ಸೇರಿದಂತೆ ಅಗತ್ಯ ಸೌಕರ್ಯ ಕಲ್ಪಿಸಿ ಪ್ರವಾಸಿ ತಾಣವಾಗಿ ಮಾಡಬೇಕಾಗಿದೆ ಎಂಬುದು ಇಲ್ಲಿನ ಗ್ರಾಮಸ್ಥರ ಒತ್ತಾಯ.