ಏಪ್ರಿಲ್ 18ರಿಂದ ಮಂಗಳೂರಿನಲ್ಲಿ ‘ಸೌಹಾರ್ದ ಬ್ಯಾರಿ ಉತ್ಸವ-25’

0
Karnataka Beary Festival- G A Bawa

ಮಂಗಳೂರು: ಕಡಲ ತಡಿ ಮಂಗಳೂರು ಅಧ್ಧೂರಿ ‘ಸೌಹಾರ್ದ ಬ್ಯಾರಿ ಉತ್ಸವ’ಕ್ಕೆ ಸಾಕ್ಷಿಯಾಗಲಿದೆ. ಏಪ್ರಿಲ್ 18ರಿಂದ ಮೂರು ದಿನಗಳ ಕಾಲ ಈ ಉತ್ಸವ ನಡೆಯಲಿದ್ದು, ಸಮುದಾಯದ ಯುವಜನರ ಅನುಕೂಲಕ್ಕಾಗಿ ‘ಉದ್ಯೋಗ ಮೇಳ’ವನ್ನೂ ಆಯೋಜಿಸಲಾಗಿದೆ.

ಈ ಕುರಿತಂತೆ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವಾ ಅವರು ಮಂಗಳೂರಿನಲ್ಲಿ ಸಮುದಾಯದ ಪ್ರಮುಖರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡರು. ಕರ್ನಾಟಕ ಬ್ಯಾರೀಸ್ ಸೋಶಿಯಲ್ ಎಂಡ್ ಕಲ್ಬರಲ್ ಫಾರಂ ಆಯೋಜಿಸುವ ಸೌಹಾರ್ದ ಬ್ಯಾರಿ ಉತ್ಸವ 2025 ಸಂಘಟನಾ ಸಮಿತಿಯ ವತಿಯಿಂದ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ 2025 ರ ಎಪ್ರಿಲ್ 18, 19, 20ರಂದು ‘ಬ್ಯಾರಿ ಸೌಹಾರ್ದ ಉತ್ಸವ’ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ಬ್ಯಾರಿ ಜನಾಂಗದ ವೈಶಿಷ್ಟ್ಯತೆ, ಸಂಸ್ಕೃತಿ, ಸೌಹಾರ್ದತೆ, ಕೊಡುಗೆಗಳು, ಸಾಧನೆಗಳು, ಪರಂಪರೆಗಳನ್ನು ಪ್ರತಿಬಿಂಬಿಸುವ ಜೊತೆಗೆ ಯುವ ಜನಾಂಗಕ್ಕೆ ದಿಕ್ಕೂಚಿಯಾಗುವ ಹಾಗೂ ಬಹು ಭಾಷಾ ಸಂಸ್ಕೃತಿಗಳನ್ನು ಪ್ರಸ್ತುತ ಪಡಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ಜಿ.ಎ.ಬಾವಾ ತಿಳಿಸಿದರು.

ಏಪ್ರಿಲ್ 18, ಶುಕ್ರವಾರ ಸಂಜೆ 4 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಏಪ್ರಿಲ್ 20ರಂದು 7 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಈ ಮೂರು ದಿನಗಳಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ ನಡೆಯಲಿದೆ. ಅದೇ ರೀತಿ ಕೆಳಕಂಡ ಸಬಲೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿ.ಎ.ಬಾವಾ ವಿವರಿಸಿದರು.


ಉದ್ಯೋಗ ಮೇಳ:

ಏಪ್ರಿಲ್ 19ರಂದು ಬೆಳಿಗ್ಗೆ 10 ಗಂಟೆಯಿಂದ ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ, ಕರ್ನಾಟಕದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಹಭಾಗಿತ್ವದಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ. ಕರಾವಳಿ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಒಂದೇ ಕಡೆಯಲ್ಲಿ ದೇಶ ವಿದೇಶಗಳ 100ಕ್ಕೂ ಹೆಚ್ಚು ಪ್ರಖ್ಯಾತ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದು, ಕರಾವಳಿ ಭಾಗ ಉದ್ಯೋಗ ಆಕಾಂಕ್ಷಿಗಳಿಗೆ ವರದಾನವಾಗಲಿದೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು. ದುಬಾಯಿ, ಸೌದಿ ಅರೇಬಿಯಾ. ಕತಾರ್ ಸೇರಿಂದ ಮಿಡಲ್ ಈಸ್ಟ್ ನ ಕಂಪೆನಿಗಳು ಇಲ್ಲಿನ ಯುವಕ — ಯುವತಿಯರಿಗೆ ಉದ್ಯೋಗ ಅವಕಾಶ ಕಲ್ಪಿಸಲಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತ ಆಗದೇ ಇಲ್ಲಿ ದಾಖಲು ಮಾಡಿದ ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳನ್ನು ನಾವು ನಿರಂತರ ಸಂಪರ್ಕದಲ್ಲಿ ಇರಿಸಿ ಅವರಿಗೆ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಮಾಡಲು ಅನುಕೂಲ ಆಗುವಂತೆ ಒಂದು ಜಾಬ್ ಪ್ಲೇಸ್ ಮೆಂಟ್ ಕಚೇರಿ ತೆರೆದಿದ್ದು ಅಲ್ಲಿ ನುರಿತ ಟ್ರೈನರ್ ಗಳು ಇವರಿಗೆ ಜಾಬ್ ಇಂಟರ್ವ್ಯೂ ತರಭೇತಿ ಮತ್ತು ಕೌಶಲ್ಯ ನೀಡಿ ಮುಂದೆಯೂ ಅವರಿಗೆ ಉದ್ಯೋಗ ಸಿಗುವಂತೆ ಮಾಡಲು ಅನುಕೂಲ ಮಾಡಿ ಕೊಡಲಿದೆ. ಈ ಸೇವೆ ನಿರಂತರ ಸಂಪೂರ್ಣ ಉಚಿತವಾಗಿ ನಡೆಯಲಿದೆ ಎಂದು ಜಿ.ಎ.ಬಾವಾ ತಿಳಿಸಿದರು. ಈಗಾಗಲೇ ದುಬೈಯಲ್ಲಿ ಬ್ಯಾರಿ ಮೇಳ ನಡೆಸಿದ ಆಯೋಜಕರು ಅಲ್ಲಿನ ನೂರಾರು ಕಂಪೆನಿಗಳ ನೆಟ್ವರ್ಕ್ ಮಾಡಿದ್ದಾರೆ. ಅವರು ಈ ಮೇಳದಲ್ಲಿ ರಿಜಿಸ್ಟರ್ ಆಗುವ ಅಭ್ಯರ್ಥಿಗಳಿಗೆ ಉದ್ಯೋಗ ಅವಕಾಸಕ್ಕೆ ಸಹಾಯ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.


ಶೈಕ್ಷಣಿಕ ಮೇಳ:

20-4-2025 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಶೈಕ್ಷಣಿಕ ಮೇಳ ನಡೆಯಲಿದೆ. ಈಗಾಗಲೇ ಕರಾವಳಿಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಬಹಳಷ್ಟು ಸಾದನೆ ಮಾಡಿದ ಪುತ್ತೂರು ಕಮ್ಯೂನಿಟಿ ಸೆಂಟರ್ ನ 100ಕ್ಕೂ ಹೆಚ್ಚು ಅನುಭವಿ ಕೌನ್ಸಿಲರ್ ಗಳು, ಮೆನ್ವರ್ಸ್ ಗಳು ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಒನ್ ಟೂ ಒನ್ ಕೌನ್ಸಿಲಿಂಗ್ ಮಾಡಲಿದ್ದಾರೆ. ಇದರಲ್ಲಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ, ಕಾಲೇಜು ಮತ್ತು ಜಾಗತಿಕ ಉದ್ಯೋಗ ಬೇಡಿಕೆ ಇರುವ ಕೋರ್ಸ್ ಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಯ ಮಾರ್ಗದರ್ಶನ ಮತ್ತು ಕೌನ್ಸಿಲಿಂಗ್ ಗಳ ದಾಖಲೆ ಹಾಗೂ ನೋಂದಾವಣೆ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸರಕಾರಿ ಮತ್ತು ಪ್ರೈವೇಟ್ ವಿದ್ಯಾರ್ಥಿ ವೇತನ ಮಾಹಿತಿ ನೀಡಲಿದ್ದೇವೆ. ವಿಶೇಷವಾಗಿ 85 % ಹೆಚ್ಚು ಅಂಕ ಪಡೆದು ದ್ವಿತೀಯ ಪಿಯುಸಿ ಪರೀಕ್ಷೆ ಪಾಸಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಪ್ರೋತ್ಸಾಹ ಸಿಗಲಿದೆ ಎಂದು ಜಿ.ಎ.ಬಾವಾ ಮಾಹಿತಿ ಒದಗಿಸಿದರು.

ಅದೇ ದಿನ 11 ಗಂಟೆಗೆ ಉದ್ಯಮ ಮೇಳ ನಡೆಯಲಿದ್ದು ಇದರಲ್ಲಿ ಸಣ್ಣ ಹಾಗೂ ದೊಡ್ಡ ಉದ್ಯಮಗಳಿಗೆ ಉದ್ಯಮದ ಪ್ರಗತಿಯ ಹಾದಿಯಲ್ಲಿ ನಿರ್ವಹಿಸಬೇಕಾದ ಕ್ರಮ, ನೀತಿ ಮತ್ತು ಸ್ಟ್ರಾಟಜಿ ಗಳ ಬಗ್ಗೆ, ಹೂಡಿಕೆ, ಬೇಡಿಕೆ ಮತ್ತು ಹೊಸ ಆಲೋಚನೆಯ ಪ್ರೋತ್ಸಾಹ ವಾತಾವರಣ ನಿರ್ಮಿಸಲಿದ್ದೇವೆ. ಅದೇ ದಿನ, ಉಚಿತ ವೈದ್ಯಕೀಯ ಶಿಬಿರ ತಪಾಸಣಾ ಶಿಬಿರ, ರಕ್ತದಾನ ಶಿಬಿರವನ್ನೂ ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನೂ ವೃತ್ತಿಪರ ಉತ್ಸಾಹಿ ಯುವಕರು ಸಂಘಟಿಸಿದ್ದಾರೆ. ಎಲ್ಲಾ ಧರ್ಮೀಯ ಯುವಕರು – ಯುವತಿಯರು, ಹಿರಿಯರು ಮತ್ತು ಕಿರಿಯರು ಇದರ ಸದುಪಯೋಗ ಪಡೆದು ನಾಡಿನ ಸೌಹಾರ್ದತೆ ಮತ್ತು ಅಭಿವೃದ್ಧಿಯಲ್ಲಿ ಪಾಲು ಸೇರಬೇಕು ಎಂದು ಎಂದು ಅವರು ಪ್ರತಿಪಾದಿಸಿದ್ದಾರೆ.

Leave a Reply

Your email address will not be published. Required fields are marked *

You may have missed