ಕೊನೆಗೂ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ರೂ ದರ ನಿಗದಿ; ಬಿಜೆಪಿ ಸ್ವಾಗತ

0
Sugarcane

ಬೆಂಗಳೂರು: ರೈತರ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವುದು ಅಧಿಕಾರದಲ್ಲಿರುವ ಸರ್ಕಾರಗಳ ಕರ್ತವ್ಯ. ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಈವರೆವಿಗೂ ಅನುಸರಿಸಿದ ಉಪೇಕ್ಷೆ ಧೋರಣೆಗಳನ್ನು ಮುಂದಾದರೂ ನಿಲ್ಲಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ದೇಶದ ಬೆನ್ನೆಲುಬು ರೈತ, ‘ಅನ್ನದಾತ ಮುನಿದರೆ ಸರ್ಕಾರ ನಿದ್ರೆಗೆ ಜಾರಲು ಸಾಧ್ಯವೇ ಇಲ್ಲ’ ಎಂಬ ಇತಿಹಾಸ ಮರುಕಳಿಸಿದೆ. ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ನಡೆದ ಕಬ್ಬು ಬೆಳೆಗಾರ ರೈತರ ಸಂಘಟಿತ ಹೋರಾಟಕ್ಕೆ ಜಯ ಸಿಕ್ಕಿದೆ. ರೈತರ ಹೋರಾಟಕ್ಕೆ ಕೊನೆಗೂ ಮಣಿದ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ರೂ ದರ ನಿಗದಿ ಪಡಿಸಿ ನಿರ್ಧಾರ ಕೈಗೊಂಡಿದೆ. ಹೋರಾಟನಿರತ ರೈತ ಬಂಧುಗಳು ನಿರ್ಧಾರವನ್ನು ಸ್ವಾಗತಿಸಿ ಮುಷ್ಕರವನ್ನು ಕೈ ಬಿಟ್ಟಿರುವುದು ಸಮಂಜಸವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಹೋರಾಟದಲ್ಲಿ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತನಾಗಿ, ರೈತನಾಯಕ ಯಡಿಯೂರಪ್ಪ ಅವರ ಪುತ್ರನಾಗಿ ಭಾಗವಹಿಸಿ ರೈತ ಹೋರಾಟಕ್ಕೆ ದನಿಗೂಡಿಸಿದ ಸಂದರ್ಭ ನನ್ನಲ್ಲಿ ಸಾರ್ಥಕಭಾವ ಮೂಡಿಸಿದೆ. ರಾಜ್ಯದಲ್ಲಿ ರೈತರ ಹಿತಕ್ಕಾಗಿ ನಮ್ಮ ಸ್ಪಂದನೆ ಸದಾ ಮುಂದುವರೆಯಲಿದೆ. ರೈತರು ಹೋರಾಟಕ್ಕಿಳಿಯುವ ಸಂದರ್ಭ ಸೃಷ್ಟಿಸದೇ ರೈತರ ಬೇಡಿಕೆಗಳನ್ನು ಕಾಲಕಾಲಕ್ಕೆ ಈಡೇರಿಸುವುದು ಅಧಿಕಾರದಲ್ಲಿರುವ ಸರ್ಕಾರಗಳ ಕರ್ತವ್ಯ.
ಕಾಂಗ್ರೆಸ್ ಸರ್ಕಾರ ಈ ನಿಟ್ಟಿನಲ್ಲಿ ಈವರೆವಿಗೂ ಅನುಸರಿಸಿದ ಉಪೇಕ್ಷೆ ಧೋರಣೆಗಳನ್ನು ಮುಂದಾದರೂ ನಿಲ್ಲಿಸಲಿ ಎಂದಿದ್ದಾರೆ.

ಮೇಲಿಂದ ಮೇಲೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಘಟನೆಗಳು ವರದಿಯಾಗುತ್ತಿವೆ, ರೈತರ ಸೂಕ್ಷ್ಮ ಭಾವನೆಗಳಿಗೆ ಸ್ಪಂದಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ರೈತರ ನಿವೇದನೆಗಳಿಗೆ ಸ್ಪಂದಿಸುವ ‘ವಿಶೇಷ ರೈತ ನೆರವು ಘಟಕ’ವನ್ನು ಸ್ಥಾಪಿಸಲಿ ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್ ಸೇರಿದಂತೆ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳ ವಿವಿಧ ಭಾಗಗಳಲ್ಲಿ ಹೋರಾಟ ನಡೆಸಿದ ರೈತರೆಲ್ಲರನ್ನೂ ಅಭಿನಂದಿಸುವೆ. ರೈತರ ಪರಿಶ್ರಮದ ಬೆವರಿಗೆ ಸಾರ್ಥಕ ಪತಿಫಲ ನಿರಂತರವಾಗಿ ಲಭಿಸುವಂತಾಗಲಿ ಎಂದಿದ್ದಾರೆ.

Leave a Reply

Your email address will not be published. Required fields are marked *

You may have missed