ಕರ್ನಾಟಕ ಏಕೀಕರಣ ಮೈದಾನ ; ನಾಮಕರಣಕೆ ವಾಟಾಳ್ ಒತ್ತಾಯ
ಬೆಂಗಳೂರಿನ ಸೆಂಟ್ರಲ್ ಕಾಲೇಜ್ ಮೈದಾನವನ್ನು ಕರ್ನಾಟಕ ಏಕೀಕರಣ ಮೈದಾನವೆಂದು ನಾಮಕರಣ ಮಾಡಬೇಕು ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಾಟಾಳ್ ನಾಗರಾಜ್, ಕರ್ನಾಟಕ ಏಕೀಕರಣ ಉದಯವಾದ ಸ್ಥಳ ಈ ಸೆಂಟ್ರಲ್ ಕಾಲೇಜ್ ಮೈದಾನ. ಹಾಗಾಗಿ ಬರುವ ನವೆಂಬರ್ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಈ ಐತಿಹಾಸಿಕ ಸ್ಥಳವನ್ನು ಕರ್ನಾಟಕ ಏಕೀಕರಣ ಮೈದಾನ ಎಂದು ಸರ್ಕಾರ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ನವೆಂಬರ್ 8 ರಂದು ಈ ಮೈದಾನದಲ್ಲಿ ಕರ್ನಾಟಕ ಏಕೀಕರಣ ವರ್ಷವನ್ನು ಆಚರಿಸಿ ನಾವೇ ಕರ್ನಾಟಕ ಏಕೀಕರಣವೆಂದು ನಾಮಫಲಕ ಹಾಕಲಿದ್ದೇವೆ ಎಂದು ಹೇಳಿದರು.
ನವೆಂಬರ್ ಒಂದರಿಂದ ಮುಂದಿನ ವರ್ಷದವರೆಗೂ ಕನ್ನಡ ಚಳವಳಿ ವರ್ಷವನ್ನು ಆಚರಿಸಲು ತೀರ್ಮಾನಿಸಲಾಗಿದೆ. ಇನ್ನು ನವೆಂಬರ್ 1 ರಂದು ಕರ್ನಾಟಕದಲ್ಲಿ ಕನ್ನಡ ಚಲನಚಿತ್ರಗಳು ಮಾತ್ರ ಪ್ರದರ್ಶನಗೊಳ್ಳಬೇಕು. ಇಲ್ಲವಾದರೆ ಚಿತ್ರಮಂದಿರಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.