ED ಆರೋಪಿಗಳ ಪಾಸ್‌ಪೋರ್ಟ್ ಮುಟ್ಟುಗೋಲು ಹಾಕಿ; EDಗೆ ಮನವಿ
ಬೆಂಗಳೂರು: ಮುಡಾ ಹಗರಣದ ಆರೋಪಿಗಳಾಗಿರುವ ಅಧಿಕಾರಿಗಳು, ಸಂಭವನೀಯ ಸಾಕ್ಷಿದರರ ಹಾಗೂ ಪ್ರಭಾವಿಗಳ ಪಾಸ್ ಪೋರ್ಟ್ ಗಳನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಮೂಡಾದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನ ಜಾರಿ ನಿರ್ದೇಶನಾಲಯ ತನಿಖೆ ಮಾಡುತ್ತಿದೆ. ಇ.ಡಿ. ಅಧಿಕಾರಿಗಳು ಮೈಸೂರಿನ ಮೂಡಾ ಕಚೇರಿಗೆ, ತಾಲ್ಲೂಕು ಕಚೇರಿಗೆ ಭೇಟಿ ನೀಡಿ ದಾಖಲೆಗಳ ಪರಿಶೀಲನಾ ಕಾರ್ಯ ನಡೆಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.
ಇಡಿ ತನಿಖೆ ಇಷ್ಟೊಂದು ಚುರುಕುಗೊಂಡಿರುವ ಪರಿಸ್ಥಿತಿಯಲ್ಲಿ ಇಡೀ ಪ್ರಕರಣ ಮತ್ತೊಂದು ಮಜಲು ತಲುಪಿದಂತಾಗಿದೆ. ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿರುವವರು, ಅವರ ಕುಟುಂಬ ಸದಸ್ಯರು, ಹಿರಿಯ ಅಧಿಕಾರಿಗಳು ಈ ಪ್ರಕರಣದಲ್ಲಿ ಆರೋಪಿಗಳಾಗಿರುವುದರಿಂದ, ಈ ಪ್ರಕರಣ ಎಷ್ಟು ಗಂಭೀರವೋ ಅಷ್ಟೆ ಸೂಕ್ಷ್ಮವೂ ಆಗಿದೆ ಎಂದು ಅಶೋಕ್ ಹೇಳಿದ್ದಾರೆ.
ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಯ ದೃಷ್ಟಿಯಿಂದ, ಈ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಆರೋಪಿಗಳು ಹಾಗೂ ಸಂಭವನೀಯ ಸಾಕ್ಷಿದರರ ಪಾಸ್ ಪೋರ್ಟ್ ಗಳನ್ನು ಈ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ED ನಿರ್ದೇಶಕರಿಗೆ ಹಾಗು ರಾಜ್ಯ ಪೊಲೀಸ್ ಮಹಾ ನಿರ್ದೇಶಕರನ್ನು ಅಶೋಕ್ ಒತ್ತಾಯಿಸಿದ್ದಾರೆ.