ಅಪೂರ್ವ ಸಹೋದರಿಯರು..; ಸಾವಲ್ಲೂ ಒಂದಾದ ವೃದ್ಧ ಅಕ್ಕ-ತಂಗಿ

0

ಬೆಂಗಳೂರು: ದೊಡ್ಡಬಳ್ಳಾಪುರ ತಾಲ್ಲೂಕಿನ ಬಚ್ಚಹಳ್ಳಿ ಗ್ರಾಮದ ಪುಟ್ಟಮ್ಮ ಮತ್ತು ನರಸಮ್ಮ ಎಂಬ ವೃದ್ಧ ಸಹೋದರಿಯರಿಬ್ಬರು ಒಂದೇ ದಿನದ ಅಂತರದಲ್ಲಿ ನಿಧನ ಹೊಂದಿದ್ದಾರೆ.

ಗ್ರಾಮದ ಪುಟ್ಟಮ್ಮ (97) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ. ಅವರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬಂದಿದ್ದ ತಂಗಿ ನರಸಮ್ಮ(93) ಬುಧವಾರ ಮಧ್ಯಾಹ್ನ 2 ಗಂಟೆ ವೇಳೆ ಅಂತ್ಯಸಂಸ್ಕಾರಕ್ಕೆ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಕುಸಿದು ಬಿದ್ದಿದ್ದಾರೆ. ಮನೆಗೆ ಕರೆತರುವಷ್ಟರಲ್ಲಿ ಅವರು ಮೃತ ಪಟ್ಟಿದ್ದಾರೆ. ಬುಧವಾರ ಸಂಜೆ ಇಬ್ಬರ ಅಂತ್ಯಸಂಸ್ಕಾರವನ್ನೂ ಒಟ್ಟಿಗೆ ಮಾಡಲಾಗಿದೆ.

ತುಮಕೂರಿನ ವಾಮಚೇನಹಳ್ಳಿ ಪುಟ್ಟಮ್ಮ ಹಾಗೂ ನರಸಮ್ಮನವರ ತವರು ಮನೆ. ಅಕ್ಕ-ತಂಗಿಯರನ್ನು ತಾಲ್ಲೂಕಿನ ಬಚ್ಚಹಳ್ಳಿಯ ಗ್ರಾಮದ ಹನುಮಪ್ಪ ಹಾಗೂ ಕರೇಗೌಡ ಎಂಬ ಸೋದರರಿಗೆ ವಿವಾಹ ಮಾಡಲಾಗಿತ್ತು. ಪುಟ್ಟಮ್ಮ ಅವರು ಮಗಳು, ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ. ನರಸಮ್ಮ ಮೂವರು  ಗಂಡು ಮಕ್ಕಳನ್ನು, ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed