ಮೇಕೆದಾಟು, ಕೃಷ್ಣಾ, ಮಹದಾಯಿ ವಿವಾದ; ವಕೀಲರೊಂದಿಗೆ ಡಿಕೆಶಿ ಚರ್ಚೆ

0
mahadayi kalasa banduri

ನವದೆಹಲಿ; ಮೇಕೆದಾಟು ಸೇರಿದಂತೆ ಸುಪ್ರೀಂಕೋರ್ಟ್ ಅಲ್ಲಿ ಬಾಕಿಯಿರುವ ಕರ್ನಾಟಕದ ಜಲ ವಿವಾದಗಳ ಕುರಿತು ಕರ್ನಾಟಕದ ಪರ ವಾದಿಸುತ್ತಿರುವ ಹಿರಿಯ ವಕೀಲರಾದ ಮೋಹನ್ ವಿ ಕಾತರಾಕಿ, ನಿಶಾಂತ್ ಪಾಟೀಲ್, ರಾಜ್ಯದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ನನ್ನ ತಾಂತ್ರಿಕ ಸಲಹೆಗಾರರಾದ ಜೈಪ್ರಕಾಶ್ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ದೆಹಲಿಯ ಕರ್ನಾಟಕ ಭವನದಲ್ಲಿ ಚರ್ಚೆ ನಡೆಸಿದರು.

ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಈಗಾಗಲೇ ರೈತರಿಗೆ ಭೂ ಪರಿಹಾರ ನೀಡಲು ತೀರ್ಮಾನ ಮಾಡಲಾಗಿದೆ. ಹೊಸ ಕಾಯ್ದೆ ಪ್ರಕಾರ ಇದಕ್ಕೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕಿದೆ. ಬೇರೆ ರಾಜ್ಯಗಳಲ್ಲಿ ಈ ಪ್ರಾಧಿಕಾರ ರಚನೆ ಆಗಿವೆ. ಬಿಹಾರದಲ್ಲಿ ಪ್ರಾಧಿಕಾರದ ಮೂಲಕ ಸಾವಿರಾರು ಪ್ರಕರಣ ಬಗೆಹರಿಸಲಾಗಿದೆ. ಕಾನೂನು ಉಪಯೋಗಿಸಿಕೊಳ್ಳಬೇಕು. ಮಹದಾಯಿ ಯೋಜನೆ ಸಂಬಂಧ ಕೆಲವು ದಾಖಲೆ ಸಿದ್ಧಪಡಿಸಲು ಅವರು ಸೂಚಿಸಿದರು.

ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸಚಿವರ ಪತ್ರ ನಮ್ಮ ಬಳಿ ಇದೆ. ಈ ಯೋಜನೆ ಅಂದಾಜು ವೆಚ್ಚ 9 ಸಾವಿರ ಕೋಟಿ ಇತ್ತು. ಈಗ 13-14 ಸಾವಿರ ಕೋಟಿಗೆ ಏರಿಕೆಯಾಗಿದೆ. ಹೀಗಾಗಿ ನಾವು ವಿಳಂಬ ಮಾಡುವಂತಿಲ್ಲ. ನಾವು ತಮಿಳುನಾಡಿಗೆ ನಿಗದಿಯಾಗಿರುವ 177 ಟಿಎಂಸಿ ನೀರನ್ನು ನೀಡುತ್ತೇವೆ. ಅದರಲ್ಲಿ ಅನುಮಾನವಿಲ್ಲ. ಈ ಯೋಜನೆಯಲ್ಲಿ ವಿದ್ಯುತ್ ಉತ್ಪಾದನೆ ಕೂಡ ಇದೆ. ಹೀಗಾಗಿ ಕಾಲಹಾರಣ ಮಾಡಬಾರದು ಎಂದು ತೀರ್ಮಾನಿಸಿದ್ದೇವೆ ಎಂದವರು ತಿಳಿಸಿದರು.

‘ಇದೊಂದು ಮಹತ್ವದ ಸಭೆ. ಈ ಸಭೆಯಲ್ಲಿ ಮೇಕೆದಾಟು, ಕೃಷ್ಣಾ ಮೇಲ್ದಂಡೆ, ಮಹದಾಯಿ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಮೇಕೆದಾಟು ಯೋಜನೆ ಸಂಬಂಧ ವಿನಾ ಕಾರಣ ಸಮಯಾವಕಾಶದ ನೆಪದಲ್ಲಿ ವಿಚಾರಣೆ ಮುಂದೂಡಿಕೊಂಡೇ ಹೋಗಲಾಗುತ್ತಿದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ್ದೇನೆ. ನ್ಯಾಯಾಲಯದಲ್ಲಿ ವಿಶೇಷ ಪೀಠ ರಚನೆಗೆ ಮುಂದಾಗಿದ್ದು, ಈಗ ಸಮಯ ವ್ಯರ್ಥ ಮಾಡಬಾರದು ಎಂದು ಹೇಳಿದ್ದೇನೆ. ನಮ್ಮ ಸರ್ಕಾರದ ನಿರ್ಧಾರವನ್ನು ತಿಳಿಸಿದ್ದೇನೆ’ ಎಂದು ಡಿಕೆಶಿ ತಿಳಿಸಿದರು.

‘ನಮ್ಮ ರಾಜ್ಯದ ಬಿಜೆಪಿ ಸಂಸದರು ರಾಜ್ಯದ ಹಿತಕ್ಕಾಗಿ ಧೈರ್ಯವಾಗಿ ಹೋರಾಟ ಮಾಡದಿದ್ದರೆ, ಅವರು ನಮಗೆ ನ್ಯಾಯ ಒದಗಿಸಿಕೊಡಲು ಸಾಧ್ಯವಿಲ್ಲ. ನಾವು ರಾಜ್ಯ ಸರ್ಕಾರವಾಗಿ ನಮ್ಮ ಕರ್ತವ್ಯ ಮಾಡುತ್ತೇವೆ. ಸಂಸದರು ಒಂದೂ ದಿನ ಬಾಯಿ ಬಿಟ್ಟು ಮಾತನಾಡುತ್ತಿಲ್ಲ. ಈ ವಿಚಾರಣೆ ಮುಗಿಯಲಿ, ಚಳಿಗಾಲದ ಅಧಿವೇಶನದ ವೇಳೆ ಮತ್ತೆ ಸಭೆ ನಡೆಸುತ್ತೇನೆ’ ಎಂದವರು ತಿಳಿಸಿದರು.

Leave a Reply

Your email address will not be published. Required fields are marked *

You may have missed