‘ತುಳು’ ಕರ್ನಾಟಕದ 2ನೇ ಅಧಿಕೃತ ಭಾಷೆಯಾಗಲಿ: ದೆಹಲಿ ‘ಕರಾವಳಿ ಸಮಾವೇಶ’ದಲ್ಲಿ‌ ವಸಂತ ಶೆಟ್ಟಿ ಬೆಳ್ಳಾರೆ ಆಗ್ರಹ

0

ದೆಹಲಿ: ತುಳು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಲಿ ಎಂಬ ಆಗ್ರಹವನ್ನು ದೆಹಲಿಯಲ್ಲಿ‌ ನಡೆದ ‘ಕರಾವಳಿ ಸಮಾವೇಶ’ ರಾಜ್ಯ ಸರ್ಕಾರದ ಮುಂದಿಟ್ಟಿದೆ. ಈ ಸಮಾವೇಶದಲ್ಲಿ ದೆಹಲಿ ಕನ್ನಡ ಸಂಘದ ನಿಕಟಪೂರ್ವ ಅಧ್ಯಕ್ಷರೂ ಆದ ವಸಂತ ಶೆಟ್ಟಿ ಬೆಳ್ಳಾರೆ ಅವರ ಕರೆ ಗಮನಸೆಳೆಯಿತು.

ಸಮಾವೇಶದಲ್ಲಿ ಮಾತನಾಡಿದ ವಸಂತ ಶೆಟ್ಟಿ ಬೆಳ್ಳಾರೆ, ʼತುಳು ಬಂಧುಗಳು ಎಂದಿಗೂ ಕನ್ನಡದ ವಿರೋಧಿಗಳಾಗಿರಲೇ ಇಲ್ಲ. ತುಳುವರು ಕನ್ನಡದ ಅಭಿವೃದ್ಧಿಗೆ ವಿಶೇಷವಾಗಿ ದುಡಿದಿದ್ದಾರೆ, ಅದನ್ನು ಕನ್ನಡಿಗರೂ ಗುರುತಿಸಿದ್ದಾರೆ. ತುಳು ಭಾಷೆಗೆ ಸಂವಿಧಾನದ ಎಂಟನೇ ಪರಿಚ್ಚೇದದದಲ್ಲಿ ಸ್ಥಾನ ಸಿಗಬೇಕೆಂಬ ತುಳುವರ ಬೇಡಿಕೆಯನ್ನು ಕರ್ನಾಟಕ ಸರಕಾರವೇ ಶಿಫಾರಸ್ಸಿನೊಂದಿಗೆ ಕೇಂದ್ರ ಸರಕಾರಕ್ಕೆ ಕಳಿಸಿಕೊಟ್ಟಿದೆ. ‘ದೆಹಲಿ ತುಳು ಸಿರಿ’ಯೂ ಅದಕ್ಕಾಗಿ ಹೋರಾಟ ನಡೆಸುತ್ತಲೇ ಬಂದಿದೆ. ಆದರೆ ಇದೀಗ ಕರ್ನಾಟಕ ಸರಕಾರವು ಎರಡನೇ ಅಧಿಕೃತ ಭಾಷೆಯನ್ನಾಗಿ ತುಳುವನ್ನು ಅಂಗೀಕರಿಸಬಹುದೇ ಎಂಬುದನ್ನು ಪರಿಶೀಲಿಸಿ ವರದಿ ನೀಡಲು ಡಾ. ಮೋಹನ ಆಳ್ವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ನೇಮಕ ಮಾಡಿದೆ. ಈ ಸಮಿತಿಯ ಶಿಫಾರಸ್ಸನ್ನು ಕರ್ನಾಟಕ ಸರಕಾರ ಅಂಗೀಕರಿಸಿದರೆ ತುಳು ಎಂಟನೇ ಪರಿಚ್ಛೇದವನ್ನು ಸೇರಿ ಆ ಭಾಷೆ ಅಭಿವೃದ್ಧಿಯಾಗುತ್ತದೆ ಎಂದರು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಕರಾವಳಿ ಸಮಾವೇಶವನ್ನು ‘ದೆಹಲಿ ತುಳುಸಿರಿ’/ಆಯೋಜಿಸಿತ್ತು. ಈ ತುಳು ಸಿರಿ ಅಧ್ಯಕ್ಷರೂ ಆದ ವಸಂತ ಶೆಟ್ಟಿ ಬೆಳ್ಳಾರೆ  ಅವರು ತುಳು ಭಾಷೆಗೆವೆದುರಾಗಿರುವ ಸವಾಲುಗಳ ಬಗ್ಗೆ ಗಮನಸೆಳೆದರು. 

ಸಮಾವೇಶದ ಮುಖ್ಯ ಅತಿಥಿ, ಕಾಂತಾರ ಸಿನೇಮಾ ಖ್ಯಾತಿಯ  ಮಾನಸಿ ಸುಧೀರ್‌  ಮಾತನಾಡಿ,  ಕರಾವಳಿಯವರ ಜೀವನ ಕ್ರಮವೇ ಭಿನ್ನವಾಗಿದ್ದು ಅದು ಅವರ ಸಂಸ್ಕೃತಿಯಲ್ಲಿ ಎದ್ದು ಕಾಣುತ್ತದೆ ಎಂದರು.

ಕರಾವಳಿಯವರ ಭಾಷೆ, ಭೂತಾರಾಧನೆ, ವೇಷ ಭೂಷಣಗಳು ಎಲ್ಲವೂ ಗಮನಾರ್ಹವಾಗಿದೆ. ಈ ವಿಶಿಷ್ಟ ಅಂಶಗಳನ್ನು ರಿಷಭ್‌ ಶೆಟ್ಟಿಯವರು ಸೂಕ್ಷ್ಮವಾಗಿ ಗಮನಿಸಿ ಕಾಂತಾರ ಸಿನೇಮಾದಲ್ಲಿ ಬಹಳ ಅದ್ಭುತವಾಗಿ ಹಿಡಿದಿಟ್ಟರು. ಅದರಿಂದ ಕರಾವಳಿ ಸಂಸ್ಕೃತಿಗೆ ವಿಶ್ವಮನ್ನಣೆ ದೊರಕಿದೆ ಎಂದರು, ಕರಾವಳಿಯ ಉದ್ದಗಲಕ್ಕೂ ಇರುವ ವಿಶೇಷ ರೀತಿಯ ಆರೋಗ್ಯಕರ ವ್ಯಂಜನಗಳನ್ನು ನೆನಪಿಸಿಕೊಂಡರು ಹಾಗೂ ಭಾಷಾ ಬಾಂಧವ್ಯ, ಸಾಮಾಜಿಕ ಸಾಮರಸ್ಯದ ವಿಶೇಷತೆಯ ಒತ್ತು ಕೊಡುವ ನಿಟ್ಟಿನಲ್ಲಿ ತನ್ನ ಕೆಲವು ಅನುಭವಗಳನ್ನು ಸೊಗಸಾಗಿ ಹಂಚಿಕೊಂಡರು.

ಈಶ್ವರ ಮಡಿವಾಳ್‌ ರವರು, ಕರಾವಳಿಯ ಸಾಮಾಜಿಕ ಇತಿಹಾಸಗಳನ್ನು ನೆನಪಿಸಿಕೊಂಡರೆ, ಪ್ರೊ. ವಿಶ್ವನಾಥ, JNU ಕನ್ನಡ ಪೀಠದ ಅಧ್ಯಕ್ಷರು, ಕರಾವಳಿಯ ಅಡುಗೆ ಹಾಗೂ ಅಡುಗೆ ಭಟ್ಟರ ಕೈ ರುಚಿ ವಿಶ್ವ ಪ್ರಸಿದ್ಧ ಎಂಬ ವಿಷಯ ಹೇಳಿದರೆ, ಡಾ. ಪುರುಷೋತ್ತಮ ಬಿಳಿಮಲೆಯವರು ಕರಾವಳಿ ಬದುಕಿನಲ್ಲಿ ಹಸು ಹೊಕ್ಕಾಗಿರುವ ಮಣ್ಣಿನ ಗುಣ, ನೀರಿನ ಗುಣ ವಾತಾವರಣದಿಂದಾಗಿ ಕಂಗು, ತೆಂಗು, ವಿಶೇಷ ಬಗೆಯ ತರಕಾರಿ, ಸೂಜಿ ಮಲ್ಲಿಗೆ ಜಾಜಿಯಂತಹ ಹೂವುಗಳ ಬಗ್ಗೆ ಸಂಕ್ಷಿಪ್ತವಾಗಿ ಕೆಲವು ಸೂಕ್ಷ್ಮಗಳನ್ನು ತೆರೆದಿಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ತುಳುಸಿರಿಯ ಉಪಾಧ್ಯಕ್ಷೆ ಮಾಲಿನಿ ಪ್ರಹ್ಲಾದ್‌ ಅವರು ಎಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಕಾರ್ಯದರ್ಶಿ ಉಡುಪಿ ಶ್ರೀಹರಿ ಭಟ್‌ ರವರು, ಸಭೆಯನ್ನು ಅಲಂಕರಿಸಿದ ಸಭಾಸದರಿಂದ ಆರಂಭಿಸಿ, ಸಿಬ್ಬಂದಿ ವರ್ಗ, ತಾಂತ್ರಿಕ ವರ್ಗ, ಅತಿತಿಗಳೊಂದಿಗೆ ಸಹಕಾರ ನೀಡಿದ ಸ್ಥಳೀಯ ಸಂಸ್ಥೆಗಳು ಹಾಗೂ ಮಾಧ್ಯಮ ಮಿತರಿಗೆ ವಂದನಾರ್ಪಣೆ ಮಾಡಿದರು. ಪೂಜಾರಾವ್‌ ರವರು ಕರಾವಳಿಯ ಎಲ್ಲಾ ಭಾಷೆಗಳಲ್ಲಿ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸ್ಥಳೀಯ ಕರಾವಳಿ ಕಲಾವಿದರಿಂದ ಸಂಗೀತ ಕಾರ್ಯಕ್ರಮದೊಂದಿಗೆ ಆರಂಭ ಹಾಗೂ ಕುದ್ರೋಳಿ ಗಣೇಶ್‌ ರವರ ಮ್ಯಾಜಿಕ್‌ ಪ್ರದರ್ಶನ ಗಮನಸೆಳೆಯಿತು.

Leave a Reply

Your email address will not be published. Required fields are marked *

You may have missed