ಉಗ್ರ ಡೇವಿಡ್ ಹೆಡ್ಲಿ ಬಾಯ್ಬಿಟ್ಟ ಭಯಾನಕ ಸತ್ಯ
ಮುಂಬೈ ದಾಳಿಯ ರೂವಾರಿ ಡೇವಿಡ್ ಹೆಡ್ಲಿ ಮತ್ತಷ್ಟು ಭಯಾನಕ ಸತ್ಯಗಳನ್ನು ಬಾಯ್ಬಿಟ್ಟಿದ್ದಾನೆ. ಇಶ್ರತ್ ಜಹಾನ್, ಶಿವಸೇನೆ ಮುಖ್ಯಸ್ಥ ಬಾಳ್ ಠಾಕ್ರೆ ಹತ್ಯೆಯ ಸಂಚು, ಥಾವೂರ್ ರಾಣಾನ ಕೈವಾಡ ಸೇರಿದಂತೆ ಮುಂಬೈನ ದಾಳಿಯ ಬಗ್ಗೆ ಸ್ಫೋಟಕ ಮಾಹಿತಿಗಳನ್ನು ಹೊರಗೆಡವಿದ್ದ ಹೆಡ್ಲಿ, ಇಂದು ಉಗ್ರ ಕಸಬ್ ಬಿಡುಗಡೆಗೆ ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ಕಸರತ್ತು ನಡೆಸಿದ್ದು ಸೇರಿದಂತೆ ಮತ್ತಷ್ಟು ರೋಚಕ ಸತ್ಯಗಳನ್ನು ಹೊರಹಾಕಿದ್ದಾನೆ.
ಅಮೆರಿಕಾದ ಅಜ್ಞಾತ ಸ್ಥಳದಿಂದ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈ ಕೋರ್ಟ್ ಗೆ ವಿಚಾರಣೆಗೆ ಹಾಜರಾದ ಡೇವಿಡ್ ಹೆಡ್ಲಿ, ಉಗ್ರ ಅಜ್ಮಲ್ ಕಸಬ್ ಬಿಡುಗಡೆಗೊಳಿಸುವ ಸಲುವಾಗಿ ಲಷ್ಕರ್-ಎ-ತೋಯ್ಬಾ ಸಂಘಟನೆ ಸಾಕಷ್ಟು ಯೋಜನೆಗಳನ್ನು ರೂಪಿಸಿತ್ತು. ಇದಕ್ಕಾಗಿ ಇಸ್ರೇಲ್ ಜನರನ್ನು ಒತ್ತೆಯಾಳನ್ನಾಗಿರಿಸಿಕೊಂಡು ಭಾರತದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದ್ದವು ಎಂಬ ಮತ್ತೊಂದು ಭಯಾನಕ ಸತ್ಯವನ್ನು ಬಾಯ್ಬಿಟ್ಟಿದ್ದಾನೆ.
ಕಸಬ್ ಬಂಧನದ ಬಗ್ಗೆ ಎಲ್ ಇಟಿ ಸಂಘಟನೆ ಪ್ರಮುಖ ವ್ಯಕ್ತಿಯಾಗಿರುವ ಸಾಜೀದ್ ಮೀರ್ ನನಗೆ ತಿಳಿಸಿದ್ದ. ಕೂಡಲೆ ಚಾಬಾದ್ ಹೌಸ್ ನಲ್ಲಿದ್ದ ಉಗ್ರರ ಜೊತೆ ಈ ವೇಳೆ ಮಾತುಕತೆ ನಡೆಸಲಾಗಿತ್ತು ಎಂದು ಹೇಳಿದ್ದಾನೆ.
ಅಲ್ಲದೆ, ಇಸ್ರೇಲ್ ಪ್ರಜೆಗಳನ್ನು ಒತ್ತೆಯಾಳಾಗಿರಿಸಿಕೊಂಡು ಭಾರತದ ಮೇಲೆ ಇಸ್ರೇಲ್ ಪ್ರಧಾನಿಯಿಂದ ಒತ್ತಡ ಹೇರಲು ಸೂಚಿಸುವಂತೆ ಸಜೀದ್ ಮೀರ್ ಪ್ರಯತ್ನ ನಡೆಸಿದ್ದ. ಆದರೆ ಈ ಪ್ರಯತ್ನ ಫಲಿಸಲಿಲ್ಲ ಎಂದು ಡೇವಿಡ್ ಹೆಡ್ಲಿ ಹೇಳಿಕೊಂಡಿದ್ದಾನೆ.
ಅಲ್ಲದೆ, ಮುಂಬೈನ ಮೇಲಿನ ದಾಳಿಯಲ್ಲಿ ಪಾಲ್ಗೊಂಡ ಆತ್ಮಾಹುತಿ ದಳದ ಎಲ್ಲ 9 ಮಂದಿ ಉಗ್ರರಿಗೂ ಪಾಕಿಸ್ತಾನ ಅತ್ಯುನ್ನತ ಗೌರವ ನಿಶಾನ್-ಏ-ಹೈದರ್ ನೀಡಬೇಕೆಂಬುದು ನನ್ನ ಬಯಕೆಯಾಗಿತ್ತು ಎಂದು ತಿಳಿಸಿದ್ದಾನೆ.
ಗುಜರಾತ್ ನಲ್ಲಿ ಎನ್ ಕೌಂಟರ್ ಹತ್ಯೆಯಾದ ಇಶ್ರತ್ ಜಹಾನ್ ಉಗ್ರರೆಂದು ಹೇಳುವಂತೆ ನನ್ನ ಮೇಲೆ ರಾಷ್ಟ್ರೀಯ ತನಿಖಾ ತಂಡ ಒತ್ತಡ ಹೇರಿರಲಿಲ್ಲ ಎಂಬುದನ್ನು ಹೆಡ್ಲಿ ಸ್ಪಷ್ಟಪಡಿಸಿದ್ದಾನೆ.