ದಲಿತ ಸಿಎಂ ಘೋಷಿಸಿ ; ಹೈಕಮಾಂಡ್ ಗೆ ಪತ್ರ
ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮನವರಿಕೆ ಮಾಡಿಕೊಟ್ಟ ಮಧ್ಯೆ, ಇತ್ತ, ರಾಜ್ಯಕ್ಕೆ ದಲಿತ ಸಿಎಂ ಬೇಕೆಂಬ ಕೂಗು ಮಾರ್ದನಿಸಿದೆ. ಕಾಂಗ್ರೆಸ್ ಅಧಿಕಾರದ ಅರ್ಧ ಅವಧಿ ಮುಗಿದಿದ್ದು, ಉಳಿದ ಅವಧಿಗೆ ದಲಿತ ಮುಖ್ಯಮಂತ್ರಿಗಳನ್ನು ಘೋಷಿಸಿ ಅವಕಾಶ ಕಲ್ಪಿಸುವಂತೆ ಪಕ್ಷದ ವರಿಷ್ಠರಿಗೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಎಫ್ ಎಚ್ ಜಕ್ಕಪ್ಪನವರ್, ಕಾರ್ಯದರ್ಶಿ ಛಲವಾದಿ ನಾರಾಯಣಸ್ವಾಮಿ, ಪತ್ರ ಬರೆದಿದ್ದಾರೆ. ಮಾಜಿ ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಸಿಎಂ ಗಾದಿಗೆ ಸೂಕ್ತ ವ್ಯಕ್ತಿಯಾಗಿದ್ದು, ಮುಂಬರುವ 2018ರಲ್ಲಿ ಮತ್ತೆ ರಾಜ್ಯದ ಚುಕ್ಕಾಣಿ ಹಿಡಿಯುವಂತಾಗಲು ಈ ಬದಲಾವಣೆ ಅನಿವಾರ್ಯ ಎಂದವರು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಮಧ್ಯೆ, ಕಲಬುರಗಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ, ದಲಿತ ಸಿಎಂ ಕುರಿತು ಪ್ರತಿಕ್ರಿಯಿಸಿದ ಮಾಜಿ ಸ್ಪೀಕರ್, ಶಾಸಕ ರಮೇಶ್ ಕುಮಾರ್, ದಲಿತರು ಸಿಎಂ ಸ್ಥಾನ ಕೇಳೋದು ತಪ್ಪಲ್ಲ. ಪ್ರಸ್ತಾಪ, ಸಂತಸದ ವಿಚಾರ. ಆದರೆ ರಾಜ್ಯದಲ್ಲಿ ದಲಿತ ಸಿಎಂ ಅನಿವಾರ್ಯ ಎನ್ನುವಂತಹ ಸನ್ನಿವೇಶ ಉದ್ಭವಿಸಿಲ್ಲ ಎಂದರು. ಸಿಎಂ ಸಿದ್ಧರಾಮಯ್ಯ ಐದು ವರ್ಷ ಪೂರ್ಣಗೊಳಿಸುತ್ತಾರೆ ಎಂದ ರಮೇಶ್ ಕುಮಾರ್, ವರಿಷ್ಠರ ನಿರ್ಧಾರಕ್ಕೆ ಪಕ್ಷದಲ್ಲಿ ಎಲ್ಲರೂ ಬದ್ಧ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿಗಳ ಬದಲಾವಣೆ ಕೂಗು ಕುರಿತು ಪ್ರತಿಕ್ರಿಯಿಸಿದ ಶಾಸಕ ಸೋಮಶೇಖರ್, ಸದ್ಯಕ್ಕೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಅಪ್ರಸ್ತುತ. ಸಿದ್ಧರಾಮಯ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ದಲಿತ ಸಿಎಂ ವಿಚಾರವನ್ನು ಸೋಮಶೇಖರ್ ತಳ್ಳಿ ಹಾಕಿದ್ದಾರೆ.