ಮೇಕೆದಾಟು ಮಾದರಿಯಲ್ಲೇ ‘ಭಾರತ್ ಜೋಡೋ ಯಾತ್ರೆ’ಗೂ ಅಡ್ಡಿ? ಕಾಂಗ್ರೆಸ್ ಆರೋಪ

0

ಹುಬ್ಬಳ್ಳಿ: ‘ಬಿಜೆಪಿಯವರು ನಮ್ಮ ಮೇಕೆದಾಟು ಯಾತ್ರೆ ತಡೆಯಲು ಹೇಗೆ ಕೋವಿಡ್ ನೆಪವೊಡ್ಡಿ ಅಡ್ಡಿ ಮಾಡಿದ್ದರೋ ಅದೇ ರೀತಿ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ ಅಡ್ಡಿಪಡಿಸಲು ಮುಂದಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ದ ಆಕ್ರೋಶ ಹೊರಹಾಕಿದರು. ಕೋವಿಡ್ ಹೆಚ್ಚಳವಾಗಲಿದೆ, ಹೀಗಾಗಿ ಭಾರತ್ ಜೋಡೋ ಯಾತ್ರೆ ಸ್ಥಗಿತಗೊಳಿಸಿ ಎಂದು ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಾಗಿದೆ. ಮೇಕೆದಾಟು ಪಾದಯಾತ್ರೆ ಮಾಡುವಾಗ ನನ್ನ ಹಾಗೂ ಸಿದ್ದರಾಮಯ್ಯ ಅವರ ವಿರುದ್ಧ 4-5 ಕೇಸ್ ಹಾಕಿದ್ದಾರೆ. ಅದೇ ರೀತಿ ರಾಹುಲ್ ಗಾಂಧಿ ಅವರ ಯಾತ್ರೆಗೆ ಯಾರೂ ಹೋಗಬಾರದು ಎಂದು ಪ್ರಚಾರ ಮಾಡಲು ಹೊರಟಿದ್ದಾರೆ ಎಂದವರು ದೂರಿದರು.

ಈ ವಿಚಾರವಾಗಿ ವೈಜ್ಞಾನಿಕವಾಗಿ ಮಾಹಿತಿ ಬಂದಿಲ್ಲ. ಇದರ ಜತೆಗೆ ಕೋವಿಡ್ ನೆಪವೊಡ್ಡಿ ಚುನಾವಣೆಯನ್ನು ಮುಂಚಿತವಾಗಿ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂಬ ಅನಧಿಕೃತ ಮಾಹಿತಿ ಬಂದಿದೆ. ಅವರು ಯಾವಾಗ ಚುನಾವಣೆ ಮಾಡಿದರೂ ನಮ್ಮ ಪಕ್ಷ ಸಿದ್ಧವಿದೆ ಎಂದವರು ಹೇಳಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ. ಉಪಕುಲಪತಿ ಹುದ್ದೆಗೆ ಕೋಟಿಗಟ್ಟಲೇ ವ್ಯವಹಾರದ ಬಗ್ಗೆ ಸಂಸತ್ ಸದಸ್ಯ ಪ್ರತಾಪ್ ಸಿಂಹ ಹಾಗೂ ಇತರ ನಾಯಕರು ಮಾತನಾಡಿದ್ದಾರೆ. ಯುವಕರಿಗೆ ಉದ್ಯೋಗ ನೀಡುವ ವಿಚಾರದಲ್ಲಿ ಭ್ರಷ್ಟಾಚಾರಕ್ಕೆ ಕೊನೆ ಇಲ್ಲವಾಗಿದೆ. ಸಹಕಾರಿ ಸಚಿವರು ಡಮ್ಮಿಯಾಗಿದ್ದಾರೆ. ಅವರು ಒಂದೂ ಸೊಸೈಟಿ ಹಾಗೂ ಎಪಿಎಂಸಿಗೆ ಹಣ ನೀಡಿಲ್ಲ. ರೈತರಿಗೆ, ಹಾಲು ಒಕ್ಕೂಟಗಳಿಗೆ ಯಾವುದೇ ನೆರವಾಗಿಲ್ಲ. ಎಲ್ಲ ಡಿಸಿಸಿ ಬ್ಯಾಂಕ್ ಹಣವನ್ನು ಸಕ್ಕರೆ ಕಾರ್ಖಾನೆಯವರಿಗೆ ನೀಡಿ ಅವರ ಜತೆ ಹೊಂದಾಣಿಕೆ ಮಾಡಿಕೊಂಡು ಸಾಲ ಕೊಟ್ಟ ಬ್ಯಾಂಕುಗಳಿಗೆ ಹಣ ವಾಪಸ್ ಸಿಗದಂತೆ ಮಾಡಿದ್ದಾರೆ. ಸಹಕಾರಿ ಬ್ಯಾಂಕುಗಳಿಗೆ 500-600 ಕೋಟಿ ಸಾಲ ವಾಪಸ್ ನೀಡಬೇಕಿದೆ. ಈ ಅಕ್ರಮದ ಹಿಂದೆ ಸಚಿವರು ಹಾಗೂ ಶಾಸಕರ ಕುಮ್ಮಕ್ಕು ಇದೆ ಎಂದು ಡಿಕೆಶಿ ಆರೋಪಿಸಿದರು.

ಬಿಜೆಪಿ ನಾಯಕರು ಆಸ್ತಿ ಮಾಡಿಕೊಳ್ಳಲು ಸಹಕಾರಿ ಬ್ಯಾಂಕ್ ಗಳ ಹಣ ನೀಡುತ್ತಿದ್ದಾರೆ. ಈ ಸಹಕಾರಿ ಬ್ಯಾಂಕ್ ಗಳಿಗೆ ಆಗುತ್ತಿರುವ ಅನ್ಯಾಯ ತಡೆಯಲು ಸಚಿವ ಸೋಮಶೇಖರ್ ಒಂದು ದಿನವೂ ಪ್ರಯತ್ನ ಮಾಡಿಲ್ಲ. ಯಡಿಯೂರಪ್ಪ, ಸಚಿವರು, ಮುಖ್ಯಮಂತ್ರಿ ಬೊಮ್ಮಾಯಿ ಅವರು ಅವರ ರಕ್ಷಣೆಗೆ ನಿಂತಿದ್ದಾರೆ. ಅಪೆಕ್ಸ್ ಬ್ಯಾಂಕ್ ನಲ್ಲಿ ಸಾಲ ನೀಡುವಾಗ ಅದರದೇ ಆದ ಪ್ರಕ್ರಿಯೆಗಳಿರುತ್ತವೆ. ಆದರೆ ಇಲ್ಲಿ ಪ್ರಕ್ರಿಯೆಗಳನ್ನೆಲ್ಲ ಬಿಟ್ಟು ಸಾಲ ನೀಡಲಾಗಿದೆ. ನಾನು ಹೇಳುತ್ತಿರುವುದು ಸುಳ್ಳಾಗಿದ್ದರೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿ. ಬೊಮ್ಮಾಯಿ ಅವರು ಹೇಳುವಂತೆ ಬಿಜೆಪಿ ಭ್ರಷ್ಚಾಚಾರದ ಗಂಗೋತ್ರಿ. ಇಂತಹವರನ್ನು ಬಿಟ್ಟು ನನ್ನ ವಿರುದ್ಧ ಐಟಿ, ಇಡಿ ದಾಳಿ ಮಾಡಿಸುತ್ತಾರೆ ಎಂದವರು ದೂರಿದರು.

Leave a Reply

Your email address will not be published. Required fields are marked *

You may have missed