ವಿಧಾನಸಭಾ ಸಮರ ತಂತ್ರ: ಕೈ ನಾಯಕರ ರಣವ್ಯೂಹ

0

ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ರಣವ್ಯೂಹ ರಚಿಸುತ್ತಿರುವ ಕಾಂಗ್ರೆಸ್ ಬೆಳಗಾವಿಯಲ್ಲಿ ಕೈಗೊಂಡ ಕಾರ್ಯತಂತ್ರ ಕುತೂಹಲ ಕೆರಳಿಸಿದೆ.

ಬೆಳಗಾವಿಯ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಚುನಾವಣಾ ಸಮಿತಿಯ ಮೊದಲ ಸಭಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್,  ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹಿತ ಪ್ರಮುಖ ನಾಯಕರ ಸಹಭಾಗಿತ್ವ ಕೂಡಾ ಗಮನ ಕೇಂದ್ರೀಕರಿಸಿತು.

ಈ ನಡುವೆ ಕಾಂಗ್ರೆಸ್‌ನ ಚುನಾವಣಾ ತಂತ್ರಗಾರಿಕೆ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನೂತನವಾಗಿ ರಚನೆಯಾಗಿರುವ ಚುನಾವಣಾ ಸಮಿತಿಯು ಟಿಕೆಟ್ ಆಕಾಂಕ್ಷಿಗಳ ಅರ್ಜಿಯನ್ನು ಹೇಗೆ ಪರಿಶೀಲಿಸಬೇಕು, ಆಯ್ಕೆ ಪ್ರಕ್ರಿಯೆ ಹೇಗಿರಬೇಕು ಎಂದು ನಾಯಕರು ತೀರ್ಮಾನಿಸಲಿದ್ದಾರೆ ಎಂದರು.

ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್, ಪದಾಧಿಕಾರಿಗಳ ಬಳಿ ಈ ಅರ್ಜಿ ರವಾನಿಸಲಾಗುವುದು. ಪಕ್ಷದ 78 ಲಕ್ಷ ಸದಸ್ಯರನ್ನು ನೋಂದಣಿ ಮಾಡಲಾಗಿದ್ದು, ಆಯಾ ಕ್ಷೇತ್ರಗಳಲ್ಲಿ ಪಕ್ಷದ ಸದಸ್ಯರ ಅಭಿಪ್ರಾಯ ಪಡೆಯಲು ಒಂದು ತಂಡ ರಚಿಸುವ ಬಗ್ಗೆ ಎಐಸಿಸಿ ಚಿಂತನೆ ಮಾಡುತ್ತಿದೆ. ಹೀಗೆ ಏನೆಲ್ಲಾ ಮಾಡಬೇಕು, ಯಾವ ನೀತಿ ರೂಪಿಸಬೇಕು ಎಂದು ಎಂಬ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ವತಿಯಿಂದ ಬಸ್ ಯಾತ್ರೆ ಮಾಡಲಾಗುತ್ತಿದ್ದು, 30 ರಂದು ವಿಜಯಪುರದಲ್ಲಿ ಕೃಷ್ಣಾ ನೀರಿನ ಹಂಚಿಕೆ ವಿಚಾರವಾಗಿ ದೊಡ್ಡ ಸಭೆ ಹಮ್ಮಿಕೊಳ್ಳಲಿದ್ದೇವೆ. ಮುಂದಿನ ತಿಂಗಳು 2 ರಂದು ಮಹದಾಯಿ ವಿಚಾರವಾಗಿ ಹೋರಾಟ, ಜನಜಾಗೃತಿಯನ್ನು ಹುಬ್ಬಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಜ.8ರಂದು ಚಿತ್ರದುರ್ಗದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.

ಬಸ್ ಯಾತ್ರೆ ಮೊದಲ ಹಂತದಲ್ಲಿ ಯಾವ ಜಿಲ್ಲೆಗಳಿಗೆ ಯಾವಾಗ ಪ್ರಯಾಣ ಮಾಡುತ್ತದೆ ಎಂಬುದು ಇಂದಿನ ಸಭೆಯಲ್ಲಿ ತೀರ್ಮಾನಿಸುತ್ತೇವೆ. ವೇಳಾಪಟ್ಟಿ ಬಹುತೇಕ ಅಂತಿಮವಾಗಿದ್ದು, ಇಂದು ಸಭೆಯಲ್ಲಿ ಪಾಲ್ಗೊಳ್ಳಲಿರುವ ನಾಯಕರ ಮುಂದೆ ಈ ವಿಚಾರ ಇಟ್ಟು ನಂತರ ಅಂತಿಮ ತೀರ್ಮಾನ ಘೋಷಿಸುತ್ತೇವೆ ಎಂದು ಡಿಕೆಶಿ ತಿಳಿಸಿದ್ದಾರೆ .

ಪಕ್ಷದಲ್ಲಿ ಯಾರು ಯಾವ ಷರತ್ತು ಹಾಕುವಂತಿಲ್ಲ. ಪಕ್ಷದ ತೀರ್ಮಾನವೇ ಅಂತಿಮ. ಪಕ್ಷದ ಅಧ್ಯಕ್ಷನಾದರೂ ನಾನೊಬ್ಬನೇ ಎಲ್ಲವನ್ನು ತೀರ್ಮಾನಿಸುವುದಿಲ್ಲ. ನಾನು ಪ್ರತಿಯೊಂದು ವಿಚಾರವನ್ನು ಸಿದ್ದರಾಮಯ್ಯ, ಹರಿಪ್ರಸಾದ್, ಕಾರ್ಯಧ್ಯಕ್ಷರು, ಜಿಲ್ಲಾ ನಾಯಕರ ಜತೆ ಚರ್ಚೆ ಮಾಡುತ್ತಿದ್ದೇನೆ. ಹುಬ್ಬಳ್ಲಿ ಧಾರವಾಡದಲ್ಲಿ ಕಾರ್ಯಕ್ರಮ ಮಾಡುವಾಗ ಹೆಚ್.ಕೆ. ಪಾಟೀಲ್ ಅವರ ಜತೆ, ಬಿಜಾಪುರದಲ್ಲಿ ಕಾರ್ಯಕ್ರಮ ಮಾಡುವಾಗ ಎಸ್.ಆರ್. ಪಾಟೀಲ್, ಎಂ.ಬಿ ಪಾಟೀಲ್, ಶಿವಾನಂದ ಪಾಟೀಲ್, ಅಲ್ಲಿನ ಶಾಸಕರ ಅವರ ಜತೆ ಚರ್ಚೆ ಮಾಡುತ್ತಿದ್ದೇನೆ ಎಂದವರು ತಿಳಿಸಿದರು.

ಅಧಿವೇಶನದ ನಡುವೆ ಸುರ್ಜೆವಾಲ ಹಾಗೂ ನಾವು ನಮ್ಮ ನಾಯಕರನ್ನು ಭೇಟಿ ಮಾಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗದ ಎಲ್ಲ ನಾಯಕರನ್ನು ಆಹ್ವಾನಿಸಿದ್ದೇವೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸುರ್ಜೆವಾಲ ಅವರು ಭಾಗವಹಿಸಲಿದ್ದಾರೆ. ನಂತರ ಹುಬ್ಬಳ್ಳಿ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಲಿದ್ದೇನೆ ಎಂದರು.

ಪಕ್ಷದ ಟಿಕೆಟ್ ಯಾರಿಗೆ ನೀಡುತ್ತೀರಿ, ಮಾನದಂಡವೇನು ಎಂದು ಕೇಳಿದ ಪ್ರಶ್ನೆಗೆ, ‘ಯಾರು ಚುನಾವಣೆಯಲ್ಲಿ ಗೆಲ್ಲುತ್ತಾರೋ ಅವರೆಲ್ಲರಿಗೂ ಟಿಕೆಟ್ ನೀಡುತ್ತೇವೆ. ಎಐಸಿಸಿ ಮುಖಂಡರು ಪ್ರತಿ ಕ್ಷೇತ್ರದಲ್ಲೂ ಟಿಕೆಟ್ ನೀಡಿಕೆ ಸಂಬಂಧ ಚರ್ಚೆ ಮಾಡುತ್ತಾರೆ. ಕಷ್ಟಕಾಲದಲ್ಲಿ ಯಾರು ಗೆದ್ದು ಕ್ಷೇತ್ರ ಉಳಿಸಿಕೊಂಡಿದ್ದಾರೋ ಅವರಿಗೆ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುತ್ತೇವೆ’ ಎಂದರು.

Leave a Reply

Your email address will not be published. Required fields are marked *

You may have missed