ಸಿಎಂ ಜನಸ್ಪಂದನ; ಯೋಜನೆಗಳ ಪರಿಪೂರ್ಣ ಲಾಭ ಫಲಾನುಭವಿಗಳಿಗೆ ಸಲ್ಲಬೇಕು

ಬೆಂಗಳೂರು : ಸರ್ಕಾರದ ಆಡಳಿತವನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನಸ್ಪಂದನ ಕಾರ್ಯಕ್ರಮವು ಮಹತ್ವದ ಹೆಜ್ಜೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದ್ದಾರೆ.

ಬಿಜೆಪಿ ಅವಧಿಯಲ್ಲಿ ನಿಂತ ನೀರಿನಂತಾಗಿ ಆಡಳಿತ ಯಂತ್ರ ಜಿಡ್ಡುಗಟ್ಟಿತ್ತು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಚುರುಕು ನೀಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಬಿಜೆಪಿ ಸರಕಾರದ ದುರಾಡಳಿತದಿಂದ ಜನರು ತತ್ತರಿಸಿ ಹೋಗಿದ್ದರು. ಅವರ ಸಮಸ್ಯೆಗಳಿಗೆ ಪರಿಹಾರ ಸಿಗದೆ ಹೈರಾಣ ಆಗಿದ್ದರು. ಇದೀಗ ಆ ಪರಿಸ್ಥಿತಿ ಬದಲಾಗಿದೆ. ಅದರ ಮುಂದಿನ ಹೆಜ್ಜೆಯಾಗಿ ಜನ ಸ್ಪಂದನ ಕಾರ್ಯಕ್ರಮವು ಆಡಳಿತದಲ್ಲಿ ಬಹು ದೊಡ್ಡ ಬದಲಾವಣೆಗೆ ಕಾರಣವಾಗಲಿದೆ ಎಂದಿದ್ದಾರೆ.

ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಜನಸ್ಪಂದನ ಕಾರ್ಯಕ್ರಮವು ಅಭೂತಪೂರ್ವ ಯಶಸ್ಸನ್ನು ಕಂಡಿದೆ. ಸಮಸ್ಯೆಯನ್ನು ಹೊತ್ತು ಬಂದಿದ್ದ ನೂರಾರು ಜನರಿಗೆ ಸ್ಥಳದಲ್ಲೇ ಪರಿಹಾರ ಸಿಕ್ಕಿದೆ. ಉಳಿದ ಸಮಸ್ಯೆಗಳನ್ನು ಆಯಾ ಇಲಾಖೆ ಮುಖ್ಯಸ್ಥರು ಕಾಲಮಿತಿಯಲ್ಲಿ ಬಗೆಹರಿಸಿ ವಾಸ್ತವ ಸಂಗತಿಯನ್ನು ಅರ್ಜಿದಾರರಿಗೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ಈಗಾಗಲೇ ಎಲ್ಲ ಸಚಿವರು ಆಯಾ ಜಿಲ್ಲಾ ಕೇಂದ್ರಗಳಲ್ಲಿ ಜನಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದ್ದಂತೆ ಜನರ ಮನೆ ಬಾಗಿಲಿಗೆ ಆಡಳಿತ ಎಂಬ ಮಾತನ್ನು ಈಡೇರಿಸಿದ ಸಂತೃಪ್ತ ಭಾವ ತಮಗಿದೆ ಎಂದಿದ್ದಾರೆ.

ಮುಂದಿನ ದಿನಗಳಲ್ಲಿ ಆಡಳಿಕ್ಕೆ ವೇಗ ನೀಡಿ ಸ್ರಕಾರದ ಎಲ್ಲಾ ಯೋಜನೆಗಳ ಲಾಭ ನೂರಕ್ಕೆ ನೂರರಷ್ಟು ಫಲಾನುಭವಿಗಳಿಗೆ ತಲುಪಿಸುವಂತೆ ಎಚ್ಚರ ವಹಿಸಲಾಗುವುದು ಎಂದರು.

ಸರಕಾರದ ಆಶಯಗಳಿಗೆ ತಕ್ಕಂತೆ ನಮ್ಮ ಯೋಜನೆ ಮತ್ತು ಕಾರ್ಯಕ್ರಮಗಳು ಅನುಷ್ಠಾನ ಗೊಂಡಿವೆಯೇ ಎಂಬುದನ್ನು ತಿಳಿದುಕೊಳ್ಳಲು ಸಮೀಕ್ಷೆ ನಡೆಸುವ ಆಲೋಚನೆಯೂ ಇದೆ. ಈ ಬಗ್ಗೆ ಸಿಎಂ ಅವರ ಜತೆ ಸಮಾಲೋಚನೆ ನಡೆಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

ಇಂದು ಬಹುದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡ ಜನರಿಗೆ ಇಲಾಖಾವಾರು ಉತ್ತರವನ್ನು ಕಾಲಮಿತಿಯಲ್ಲಿ ನೀಡುವ ಬಗ್ಗೆ ಸಿಎಂ ಕಚೇರಿಯಲ್ಲಿ ಏಕ ಗವಾಕ್ಷಿ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆಯೂ ಸಿದ್ದರಾಮಯ್ಯ ಅವರ ಜತೆ ಚರ್ಚೆ ನಡೆಸಲಾಗುವುದು ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.

You may have missed