ಕಾಲ್ತುಳಿತ ದುರಂತಕ್ಕೆ ಕಮೀಷನರ್ ಅಮಾನತು ಸರಿಯಲ್ಲ; ಸಿಎಂ-ಡಿಸಿಎಂ ತಲೆದಂಡವಾಗಬೇಕು ಎಂದ BSY

0
bsy-yadiyurappa-siddaramaiah

ಬೆಂಗಳೂರು: ಕಾಲ್ತುಳಿತ ದುರಂತಕ್ಕೆ ಕಮೀಷನರ್ ಅಮಾನತು ಸರಿಯಲ್ಲ; ಸಿಎಂ-ಡಿಸಿಎಂ ತಲೆದಂಡವಾಗಬೇಕು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸ್ವತಃ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳೇ ಮುಂದೆ ನಿಂತು ಇಡೀ ಸರ್ಕಾರವೇ ವ್ಯವಸ್ಥೆಯ ಜವಾಬ್ದಾರಿ ಹೊತ್ತು, ಆರ್.ಸಿ.ಬಿ ವಿಜಯೋತ್ಸವದ ಆಚರಣೆಗೆ ಮುಂದಾಗಿ, ಇಂತಹ ಬಹುದೊಡ್ಡ ದುರಂತಕ್ಕೆ ಕಾರಣವಾಗಿರುವಾಗ, ತಮ್ಮ ನೈತಿಕ ಜವಾಬ್ದಾರಿಯನ್ನು ಮರೆತು, ಜನರ ಆಕ್ರೋಶವನ್ನು ತಣ್ಣಗಾಗಿಸಬಹುದೆಂಬ ದುರಾಲೋಚನೆಯಿಂದ ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿ ಅಮಾನತು ಮಾಡಿರುವುದು ನಾಚಿಕೆಗೇಡಿನ ಕ್ರಮವಾಗಿದೆ ಎಂದು ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ಸಮಾರಂಭಕ್ಕೂ ಮುನ್ನವೇ ಕಾಲ್ತುಳಿತದಿಂದ ಸಾವು-ನೋವಾಗಿರುವ ಸುದ್ದಿ ತಲುಪಿದರೂ ಭಂಡತನದಿಂದ ಸನ್ಮಾನ ಕಾರ್ಯಕ್ರಮವನ್ನು ಮುಗಿಸಿ, ನಂತರ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಕಾರ್ಯಕ್ರಮ ಮುಂದುವರೆಸಿ, ಕಾಂಗ್ರೆಸ್ ಸರ್ಕಾರ ಕರುನಾಡಿನಲ್ಲಿ ಕರಾಳ ಇತಿಹಾಸ ಸೃಷ್ಟಿಸಿದೆ ಎಂದು ಸಾಮಾಜಿಕ ಜಾಲತಾಣ ‘X’ನಲ್ಲಿ ಅವರು ಬರೆದುಕೊಂಡಿದ್ದಾರೆ.

ಜನರ ಆಕ್ರೋಶವನ್ನು ತಣಿಸಲು ಹಾಗೂ ಉಚ್ಚ ನ್ಯಾಯಾಲಯದ ನ್ಯಾಯದಂಡದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳನ್ನು ಅಮಾನತುಗೊಳಿಸಿರುವುದು ಕುರ್ಚಿಗೆ ಅಂಟಿ ಕೂರುವ ಸ್ವಾರ್ಥದ ಕ್ರಮವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಯಡಿಯೂರಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ, ಉಪ-ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಗೃಹಮಂತ್ರಿ ಪರಮೇಶ್ವರ್ ಅವರಿಗೆ ಕನಿಷ್ಠ ನೈತಿಕತೆ ಇದ್ದರೆ ಈ ದುರಂತ ಘಟನೆಯ ಜವಾಬ್ದಾರಿ ಹೊತ್ತು ಈ ಕೂಡಲೇ ರಾಜಿನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ.

Leave a Reply

Your email address will not be published. Required fields are marked *