ಸಿಎಂ ಬದಲಾವಣೆಯ ಅನಿವಾರ್ಯ ; ಹೈಕಮಾಂಡ್ ಗೆ ಪರಮೇಶ್ವರ್ ಮನವರಿಕೆ

0

ಈ ತಿಂಗಳ ಅಂತ್ಯದಲ್ಲಿ ಸಂಪುಟ ಸರ್ಜರಿ ನಡೆಸಲು ಸಿಎಂ ಸಿದ್ಧರಾಗಿರುವಂತೆಯೇ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮುಖ್ಯಮಂತ್ರಿ ಬದಲಾವಣೆಯ ಅನಿವಾರ್ಯ ಪರಿಸ್ಥಿತಿ ಇದೆ ಎಂಬ ಬಗ್ಗೆ ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟ ಪ್ರಸಂಗ ಅಚ್ಚರಿಗೂ ಕಾರಣವಾಗಿದೆ. ಪ್ರಸ್ತುತ 4 ಸ್ಥಾನಗಳು ಖಾಲಿಯಿದ್ದು, ಆ ಸಚಿವ ಸ್ಥಾನಗಳನ್ನು ಭರ್ತಿ ಮಾಡುವ ಉದ್ದೇಶವನ್ನು ಸಿಎಂ ಹೊಂದಿದ್ದಾರೆನ್ನಲಾಗಿದೆ.
ದಿಲ್ಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ಸಿಎಂ ಉದ್ದೇಶಿಸಿದ್ದರಾದರೂ, ಅದಕ್ಕು ಮುನ್ನವೆ ಹೈಕಮಾಂಡ್ ಅಂಗಳಕ್ಕೆ ದೌಡಾಯಿಸಿದ್ದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಬಿಯಲ್ಲಿ ತೊಡಗಿದ್ದಾರೆ.

ಭಾನುವಾರ ಬೆಳಗ್ಗೆ ಅವರು ಪಕ್ಷದ ರಾಜ್ಯ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ  ಪರಮೇಶ್ವರ್,  ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದೂರುಗಳ ಮಾರುದ್ಧದ ಪಟ್ಟಿಯನ್ನೇ ನೀಡಿದ್ದಾರೆನ್ನಲಾಗಿದೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾಂಗ್ರೆಸ್ ದಯನೀಯ ಸ್ಥಿತಿಗೆ ತಲುಪಿದೆ. ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ. ಮೂಲ ಕಾಂಗ್ರೆಸಿಗರು ಮತ್ತು ವಲಸಿಗರು ಎಂಬ ತಾರತಮ್ಯ ಕಂಡು ಬಂದಿದೆ. ಮೂಲ ಕಾಂಗ್ರೆಸಿಗರು ಮತ್ತು ವಲಸಿಗರ ನಡುವಿನ ಕಂದಕ ಹೆಚ್ಚುತ್ತಲೇ ಇದೆ. ಅದನ್ನು ಸರಿಪಡಿಸುವ ಅಗತ್ಯವಿದೆ. ಹಾಗಾಗಿ, ಸೂಕ್ತ ಕ್ರಮಕ್ಕೆ ವರಿಷ್ಠರು ಸೂಚಿಸಬೇಕಿದೆ ಎಂದು ನಾಯಕತ್ವ ಬದಲಾವಣೆಯ ಅಗತ್ಯತೆ ಬಗ್ಗೆ ಪರಮೇಶ್ವರ್ ಹೇಳಿದರೆನ್ನಲಾಗಿದೆ.

ಸಿದ್ದರಾಮಯ್ಯ ಬೆಂಬಲಿಗರು ಜೆಡಿಎಸ್ ಜತೆ ಕೈಜೋಡಿಸುವ ಪ್ರಯತ್ನದಲ್ಲಿದ್ದಾರೆ ಎಂಬ ಬಗ್ಗೆ ಪರಮೇಶ್ವರ್, ದಿಗ್ವಿಜಯ್ ಸಿಂಗ್ ಗೆ ದೂರೊಂದನ್ನು ನೀಡಿದ್ದಾರೆ. ಸದ್ಯವೇ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನ 25 ಸ್ಥಾನಗಳ ಚುನಾವಣೆ ನಡೆಯಲಿದ್ದು, ಜೆಡಿಎಸ್ ಜತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸಿಎಂ ಬೆಂಬಲಿಗರು ಪ್ರಯತ್ನ ನಡೆಸುತ್ತಿದ್ದಾರೆ. ಇದು ಅಗತ್ಯವಿಲ್ಲ.  25 ಸ್ಥಾನಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದರೂ, ಕಾಂಗ್ರೆಸ್ 20 ಸ್ಥಾನಗಳಲ್ಲಿ  ಗೆಲ್ಲಲಿದೆ ಎಂದು ಅವರು ವರದಿ ಒಪ್ಪಿಸಿದ್ದಾರೆ.

ಈ ಮಧ್ಯೆ, ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜತೆ ಚರ್ಚಿಸಲು ಭಾನುವಾರ ದೆಹಲಿಗೆ ತೆರಳಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್ ಅವರ ಭೇಟಿ ಅಸಾಧ್ಯವಾಗಿರುವುದರಿಂದ ಸೋಮವಾರ ರಾಜಧಾನಿಗೆ  ತೆರಳಿ, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಜತೆ ಚರ್ಚಿಸಿ, ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆಯಲಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ.

Leave a Reply

Your email address will not be published. Required fields are marked *

You may have missed