ಕಾವೇರಿ ಹೋರಾಟ; ‘ಬೆಂಗಳೂರು ಬಂದ್’ಗೆ CSS ಬೆಂಬಲ
ಬೆಂಗಳೂರು: ಕಾವೇರಿ ನದಿ ನೀರು ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಆರೋಪಿಸಿ ಕನ್ನಡ ಪರ ಸಂಘಟನೆಗಳು ರೊಚ್ಚಿಗೆದ್ದಿವೆ. ಕಳೆದ ವಾರಾಂತ್ಯದಲ್ಲಿ ಮಂಡ್ಯ ಬಂದ್ ಆಚರಿಸಿರುವ ರೈತ ಕನ್ನಡಪರ ಸಂಘಟನೆಗಳು, ನಾಳೆ ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಕಾವೇರಿ ವಿಚಾರದಲ್ಲಿನ ಈ ಹೋರಾಟಕ್ಕೆ ಕ್ರಿಶ್ಚಿಯನ್ ಸೇವಾ ಸಂಘ ಕೂಡಾ ಬೆಂಬಲ ಘೋಷಿಸಿದೆ.
ರೈತ ಸಂಘಟನೆಗಳ ಒಕ್ಕೂಟದ ಮುಂದಾಳುತ್ವದಲ್ಲಿ ರಚನೆಯಾಗಿರುವ ಜಲಸಂರಕ್ಷಣಾ ಸಮಿತಿ ನಾಳಿನ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು, ಈ ಬಂದ್ ಕರೆಗೆ ಕ್ರಿಶ್ಚಿಯನ್ ಬೆಂಬಲ ಇದೆ ಎಂದು ಘೋಷಿಸಿರುವ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗಿಸ್, ಕಾವೇರಿ ವಿಚಾರದಲ್ಲಿ ನಡೆಯುವ ಹೋರಾಟಗಳಲ್ಲಿ ತಮ್ಮ ಸಂಘಟನೆ ಭಾಗಿಯಾಗಲಿದೆ ಎಂದು ಪ್ರಕಟಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ನೀಡಿರುವ ಹಿರಿಯ ವಕೀಲರೂ ಆಗಿರುವ ಕ್ರಿಶ್ಚಿಯನ್ ಸೇವಾ ಸಂಘದ ಅಧ್ಯಕ್ಷ ಶಾಜಿ ಟಿ ವರ್ಗಿಸ್ ತಮ್ಮ ಸಂಘವೂ ಭಾಗಿಯಾಗಿ ಕಾವೇರಿ ಹೋರಾಟಕ್ಕೆ ಶಕ್ತಿ ನೀಡಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದಲ್ಲಿ ಮಳೆಯ ಕೊರತೆ ಇದೆ. ಬೆಂಗಳೂರು ಸೇರಿದಂತೆ ಕಾವೇರಿ ನೀರನ್ನೇ ಅವಲಂಬಿತವಾಗಿರುವ ನಗರಗಳಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ. ಹಾಗಾಗಿ ಕೂಡಲೇ ಕಾವೇರಿ ತೀರ್ಪು ಬಗ್ಗೆ ಮೇಲ್ಮನವಿ ಸಲ್ಲಿಸಬೇಕಿದೆ ಎಂದು ಶಾಜಿ ಟಿ ವರ್ಗಿಸ್ ಅವರು ರಾಜ್ಯದ ಸಿದ್ದರಾಮಯ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.