ಟಿಕೆಟ್‌ಗಾಗಿ ಕೋಟಿ ಡೀಲ್; ಸಿಸಿಬಿ ಯಶಸ್ವಿ ಕಾರ್ಯಾಚರಣೆ; ಹಾಲಶ್ರೀ ಸ್ವಾಮಿ ಕೊನೆಗೂ ಸೆರೆ.
ಬೆಂಗಳೂರು: ಚುನಾವಣೆಯಲ್ಲಿ ಸ್ಪರ್ಧಿಸಲು ಉದ್ಯಮಿಗೆ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಪ್ರಕರಣದಲ್ಲಿ ಸಿಲುಕಿರುವ ಉತ್ತರಕರ್ನಾಟಕದ ಪ್ರಮುಖ ಮಠದ ಹಾಲಶ್ರೀ ಸ್ವಾಮೀಜಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉದ್ಯಮಿ ಗೋವಿಂದ್ ಪೂಜಾರಿ ಅವರಿಂದ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆನ್ನಲಾದ ಪ್ರಕರಣದಲ್ಲಿ ಹಿಂದೂ ಸಂಘಟನೆಯ ನಾಯಕಿ ಎನ್ನಲಾದ ಚೈತ್ರ ಕುಂದಾಪುರ ಸಹಿತ ಹಲವರ ವಿರುದ್ದ ಬೆಂಗಳೂರಿನ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹೈ ಪ್ರೊಫೈಲ್ ಕೇಸ್ ಇದಾಗಿದ್ದುದರಿಂದ ಈ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಿದ್ದರು.
ಚೈತ್ರಾ ಕುಂದಾಪುರ, ಗಗನ್ ಕಡೂರು ಸಹಿತ ಹಲವರು ಆರೋಪಿಗಳ ಬಂಧನವಾಗುತ್ತಿದ್ದಂತೆಯೇ ಹಾಲಶ್ರೀ ಸ್ವಾಮೀಜಿ ನಾಪತ್ತೆಯಾಗಿದ್ದರು. ಅವರ ಬಂಧನಕ್ಕೆ ಬಲೆ ಬೀಸಿದ್ದ ಸಿಸಿಬಿ ಪೊಲೀಸರು ಸ್ವಾಮೀಜಿ ಒಡಿಶಾಗೆ ತೆರಳಿದ್ದ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಅಲ್ಲಿಗೆ ತೆರಳಿದ ಸಿಸಿಬಿ ತಂಡ ಸ್ವಾಮೀಜಿ ಪತ್ತೆಗಾಗಿ ಕಾರ್ಯಾಚರಣೆ ನಡೆಸಿದೆ. ಸ್ವಾಮೀಜಿ ರೈಲಿನಲ್ಲಿ ಪ್ರಯಾಣ ಬೆಳೆಸಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಪೊಲೀಸರು ಹಾಲಶ್ರೀ ಸ್ವಾಮೀಜಿಯನ್ನು ವಶಕ್ಕೆ ಪಡೆದಿದ್ದಾರೆ.