ದಸರಾ ಬೆನ್ನಲ್ಲೇ ಮತ್ತೆ ಸಂಪುಟ ಸರ್ಕಸ್ ; ಈ ತಿಂಗಳ 28ರಂದು ಪುನರಚನೆ..?

0

ದಸರಾ ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಭರ್ಜರಿ ವಿದ್ಯಮಾನ ಆರಂಭಗೊಂಡಿದೆ. ಈಗಾಗಲೇ ಸಂಪುಟ ಸರ್ಜರಿ ಪ್ರಕ್ರಿಯೆಗೆ ಮುನ್ನುಡಿ ಬರೆದಿರುವ ಸಿ.ಎಂ.ಸಿದ್ದರಾಮಯ್ಯ, ಮಂತ್ರಿಮಂಡಲ ಪುನರಚನೆಯನ್ನು  ಈ ತಿಂಗಳಲ್ಲೇ ಮುಗಿಸಲು ಪಣತೊಟ್ಟಿದ್ದಾರೆ. ಹಾಗಾಗಿ, ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದ್ದರೆನ್ನಲಾಗಿದ್ದು, ಈ ತಿಂಗಳ 28 ರಂದೇ ಸಂಪುಟ ವಿಸ್ತರಣೆ ನಡೆಸಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಸರಾ ಮುಗಿಯುತ್ತಿದ್ದಂತೆಯೇ ಸಚಿವ ಸಂಪುಟ ಪುನರಚನೆ ಮಾಡುವುದಾಗಿ ಕೆಲ ದಿನಗಳ ಹಿಂದೆ ಪ್ರಕಟಿಸಿದ್ದರು. ಈ ಹಿಂದೆ ಎರಡು ಬಾರಿ ಮಂತ್ರಿಮಂಡಲ ವಿಸ್ತರಣೆಗೆ ಮುಂದಾಗಿದ್ದರಾದರೂ, ಅದು ಅಂತಿಮ ಹಂತದಲ್ಲಿ ಸಾಧ್ಯವಾಗಲಿಲ್ಲ. ಹಾಗಾಗಿ ಈ ಬಾರಿ ಪುನರಚನೆ ಮಾಡಿಯೇ ಸಿದ್ದ ಎಂದು ಸಿದ್ದರಾಮಯ್ಯ ಸಂಕಲ್ಪ ತೊಟ್ಟಂತಿದೆ. ಹಾಗಾಗಿ, ನಾಳೆ ದೆಹಲಿಗೆ ತೆರಳುವ ಸಾಧ್ಯತೆಗಳಿದ್ದು, ಹೈಕಮಾಂಡ್ ಜೊತೆ ಸೋಮವಾರ ಮಾತುಕತೆ ನಡೆಸಿ, ಸಂಪುಟ ಪುನರಚನೆಗೆ ಒಪ್ಪಿಗೆ ಪಡೆಯಲಿದ್ದಾರೆ. ಅವರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡ ದೆಹಲಿಗೆ ತೆರಳಲಿದ್ದು, ಪಕ್ಷದ ಅಧಿನಾಯಕಿ ಸೋನಿಯಾಗಾಂಧೀ ಹಾಗೂ ಎಐಸಿಸಿ ಉಪಾಧ್ಯಕ್ಷೆ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಸಂಪುಟ ಸರ್ಜರಿಗೆ ಗ್ರೀನ್ ಸಿಗ್ನಲ್ ಪಡೆಯಲಿದ್ದಾರೆ.   ಖಾಲಿಯಿರುವ ಆರು ಸ್ಥಾನಗಳ ಭರ್ತಿ ಹಾಗೂ 13 ಸಚಿವರ ಖಾತೆಗಳ ಬದಲಾವಣೆಗೆ ಸಿ.ಎಂ.ಸಿದ್ದರಾಗಿದ್ದಾರೆ ಎನ್ನಲಾಗಿದೆ. ಇದೇ ವೇಳೆ, ಕೆಲವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸಚಿವ ಸಂಪುಟ ಪುನರಚನೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ  ದೆಹಲಿಗೆ ತೆರಳಿದಾಗ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಾಗೂ ರಾಜ್ಯ ಉಸ್ತುವಾರಿ ವಹಿಸಿರುವ ದಿಗ್ವಿಜಯ್ ಸಿಂಗ್ ಅವರು ಅಮೆರಿಕಾ ಪ್ರವಾಸದಲ್ಲಿದ್ದುದರಿಂದ ಸಂಪುಟ ಪುನರಚನೆ ಸಾಧ್ಯವಾಗಲಿಲ್ಲ. ಈ ಮಧ್ಯೆ ಸಂಪುಟ ಪುನರಚನೆ ಸಾಧ್ಯತೆ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಭರ್ಜರಿ ಲಾಭಿಯಲ್ಲಿ ತೊಡಗಿದ್ದಾರೆ.

ಈಗಾಗಲೇ ಕೆ.ಬಿ.ಕೋಳಿವಾಡ, ಮಾಲಿಕಯ್ಯ ಗುತ್ತೆದಾರ್, ಬಸವರಾಮರಾಯರೆಡ್ಡಿ ಸಹಿತ 50ಕ್ಕೂ ಹೆಚ್ಚು ಶಾಸಕರು ಗುಂಪು ಕಟ್ಟಿಕೊಂಡು ಮಂತ್ರಿಗಿರಿಗಾಗಿ ಭರ್ಜರಿ ಲಾಭಿಯಲ್ಲಿ ತೊಡಗಿದ್ದಾರೆ. ಈ ಬಾರಿಯಾದರೂ ತಮಗೆ ಮಂತ್ರಿ ಸ್ಥಾನ ಸಿಗಬಹುದೆಂಬ ನಿರೀಕ್ಷೆಯಲ್ಲಿ ಹಲವರು.

Leave a Reply

Your email address will not be published. Required fields are marked *

You may have missed