ಕಿದ್ವಾಯಿ ಆಸ್ಪತ್ರೆಯಲ್ಲಿ ಥಲಸ್ಸೇಮಿಯ ಬಾಲಕನಿಗೆ ಮೊದಲ ಬಾರಿ ಅಸ್ಥಿಮಜ್ಜೆ ಚಿಕಿತ್ಸೆ ಯಶಸ್ವಿ
ಬೆಂಗಳೂರು: ನಮ್ಮ ರಾಜ್ಯದ ಹೆಮ್ಮೆಯ ಸರ್ಕಾರಿ ಆಸ್ಪತ್ರೆಯಾದ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಸಂಸ್ಥೆ ಈಗ ದಾಖಲೆ ನಿರ್ಮಿಸಿದೆ. ಅನುವಂಶಿಕ ರಕ್ತ ಕಾಯಿಲೆಗಳಲ್ಲಿ ಒಂದಾಗಿರುವ ಥಲಸ್ಸೆಮಿಯಾಕ್ಕೆ ಮೊದಲ ಬಾರಿಗೆ ಮಕ್ಕಳ ಅಸ್ಥಿಮಜ್ಜೆಯ ಕಸಿಯನ್ನು (ಬೋನ್ ಮ್ಯಾರೋ ಟ್ರಾನ್ಸ್ ಪ್ಲಂಟ್ –BMT) ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು ಶ್ಲಾಘನೀಯ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನ ಕಿದ್ವಾಯಿ ಸಂಸ್ಥೆಯಲ್ಲಿ ಈ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದ ವೈದ್ಯರಿಗೆ ಸಚಿವರು ಸಂಸ್ಥೆಗೆ ಶುಕ್ರವಾರ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು. ರಾಜ್ಯದ ದುರ್ಬಲ ವರ್ಗದ ಜನರಿಗೆ ಅಸ್ಥಿಮಜ್ಜೆ ಕಸಿ ಸೇವೆಗಳು ಸುಲಭವಾಗಿ ಲಭ್ಯವಾಗುವಂತೆ ಮತ್ತು ಕೈಗೆಟುಕುವಂತೆ ಮಾಡುವುದು ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಬದ್ಧತೆ ತೋರಿದೆ. ಮುಂದಿನ ದಿನಗಳಲ್ಲಿಯೂ ಈ ರೀತಿಯ ವಿಶೇಷ ಯೋಜನೆಗಳನ್ನು ಜಾರಿಗೆ ತರಲು ನಮ್ಮ ಸರ್ಕಾರ ಚಿಂತನೆ ನಡೆಸಿದೆ ಎಂದು ಸಚಿವರು ತಿಳಿಸಿದರು.
ಸಾಮಾನ್ಯವಾಗಿ, ಖಾಸಗಿ ಆಸ್ಪತ್ರೆಗಳಲ್ಲಿ, ಅಸ್ಥಿಮಜ್ಜೆ ಚಿಕಿತ್ಸಾ ವೆಚ್ಚವು 7 ರಿಂದ 15 ಲಕ್ಷ ರೂಪಾಯಿ ಆಗುವ ಅಂದಾಜಿದೆ ಮತ್ತು ಅಲೋಜೆನಿಕ್ ಬಿಎಂಟಿಗಳು ಲಕ್ಷಾಂತರ ರೂಪಾಯಿ ಆಗುತ್ತದೆ. ಆದರೆ ಕಿದ್ವಾಯಿ ಸಂಸ್ಥೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಡಾ. ಪಾಟೀಲ್ ತಿಳಿಸಿದರು.
ಕಿದ್ವಾಯಿ ಸಂಸ್ಥೆಯ ಆಡಳಿತಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಥಲಸ್ಸೆಮಿಯಾ ಮೇಜರ್ ಸಾಮಾನ್ಯ ಅನುವಂಶಿಕ ರಕ್ತ ಕಾಯಿಲೆಗಳಲ್ಲಿ ಒಂದಾಗಿದೆ. ಈ ಸ್ಥಿತಿಯಲ್ಲಿ, ಸಣ್ಣ ಗಾತ್ರದ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ರಕ್ತಹೀನತೆಗೆ ಮಾಸಿಕ ರಕ್ತ ವರ್ಗಾವಣೆ ಮತ್ತು ಕಬ್ಬಿಣಾಂಶದ ಅಗತ್ಯವಿರುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಂಕಿಅಂಶಗಳ ಪ್ರಕಾರ, ಥಲಸ್ಸೆಮಿಯಾ ಮೇಜರ್ ಗೆ ಪ್ರಮುಖ ಚಿಕಿತ್ಸೆ ಎಂದರೆ ಬೋನ್ ಮ್ಯಾರೋ ಟ್ರಾನ್ಸ್ಪ್ಲಾಂಟೇಷನ್ (ಬಿಎಂಟಿ). ಭಾರತದಲ್ಲಿ ಪ್ರತಿ ವರ್ಷ ಸರಿಸುಮಾರು 10,000 ರಿಂದ 15,000 ಮಕ್ಕಳು ತಲಸ್ಸೆಮಿಯಾ ಮೇಜರ್ನೊಂದಿಗೆ ಜನಿಸುತ್ತಾರೆ. ಜಾಗತಿಕ ತಲಸ್ಸೇಮಿಯಾ ಪ್ರಮಾಣದಲ್ಲಿ ದೇಶದ ಕೊಡುಗೆ ಸುಮಾರು 25% ಇದೆ ಎಂದರು.
ಏಳು ವರ್ಷದ ಬಾಲಕನಿಗೆ ಬಿಎಂಟಿ ಚಿಕಿತ್ಸೆಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಮಾಡಲಾಗಿದೆ. ಪ್ರಧಾನ ಮಂತ್ರಿಗಳ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ (ಸಿಎಂಆಆರ್ಎಎಫ್), ಎಸ್ಸಿಪಿ/ಟಿಎಸ್ಪಿ ಯೋಜನೆ, ಇಎಸ್ಐ ಮತ್ತು ಸಿಜಿಎಚ್ಎಸ್ ಯೋಜನೆಗಳನ್ನು ಬಳಸಿಕೊಂಡು ಉಚಿತವಾಗಿ ಈ ಚಿಕಿತ್ಸೆ ಮಾಡಲಾಗಿದೆ. ಥಲಸ್ಸೇಮಿಯಾದಿಂದ ಬಳಲುತ್ತಿದ್ದ ಬಾಲಕನಿಗೆ ಅಸ್ತಿಮಜ್ಜೆ ಕಸಿ ನಡೆಸುವ ಮೂಲಕ ಮರುಜೀವ ನೀಡಲಾಗಿದೆ. ನಮ್ಮ ಕಿದ್ವಾಯಿ ಸಂಸ್ಥೆಯ ವೈದ್ಯರ ತಂಡದ ಪರಿಶ್ರಮ ಹೆಚ್ಚಾಗಿದ್ದು, ತಂಡದ ಎಲ್ಲ ಸದಸ್ಯರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ನವೀನ್ ಭಟ್ ಹೇಳಿದರು.
ಪೀಡಿಯಾಟ್ರಿಕ್ ಹೆಮಟಾಲಜಿಸ್ಟ್ ಮತ್ತು ಬಿಎಂಟಿ ವೈದ್ಯ ಡಾ ವಸುಂಧರಾ ಕೈಲಾಸನಾಥ್ ಮಾತನಾಡಿ, ಹುಟ್ಟಿನಿಂದಲೇ ಬೀಟಾ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದ 7 ವರ್ಷದ ಬಾಲಕನಿಗೆ ಪ್ರತಿ ತಿಂಗಳು ರಕ್ತ ಬದಲಾವಣೆ ಮಾಡಬೇಕಾಗಿತ್ತು. ಬಾಲಕನಿಗೆ ಕೀಮೋಥೆರಪಿ ಮತ್ತು ಇಮ್ಯುನೊಥೆರಪಿ ಮಾಡಲಾಯಿತು. ನಂತರ ಅವರ ಅಕ್ಕನಿಂದ ಸಂಗ್ರಹಿಸಲಾದ ಸ್ಟೆಮ್ ಸೆಲ್ ಇನ್ಫ್ಯೂಷನ್ ಮಾಡಲಾಯಿತು. ರೋಗಿಯು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಪೀಡಿಯಾಟ್ರಿಕ್ ಹೆಮಟಾಲಜಿಸ್ಟ್ ಮತ್ತು ಬಿಎಂಟಿ ವೈದ್ಯರಾದ ಡಾ ವಸುಂಧರಾ ಕೈಲಾಸನಾಥ್ ತಿಳಿಸಿದ್ದಾರೆ. ಎಂದು ಮಾಹಿತಿ ನೀಡಿದರು.
100ನೇ ಅಸ್ಥಿಮಜ್ಜೆ ಕಸಿ:
ಕಿದ್ವಾಯಿ ಸಂಸ್ಥೆಯಲ್ಲಿ ಮೊದಲ ಪೀಡಿಯಾಟ್ರಿಕ್ BMT ಅನ್ನು ಏಪ್ರಿಲ್ 2022 ರಲ್ಲಿ ನಡೆಸಲಾಯಿತು. ಅಂದಿನಿಂದ, 100 ಪೀಡಿಯಾಟ್ರಿಕ್ ಮತ್ತು ವಯಸ್ಕರ ಅಸ್ಥಿಮಜ್ಜೆ ಕಸಿಗಳನ್ನು ಮಾಡಲಾಗಿದೆ.
14-ಹಾಸಿಗೆ ಸೌಲಭ್ಯ ಮತ್ತು ತೀವ್ರ ನಿಗಾ ಘಟಕವನ್ನು ಹೊಂದಿರುವ ಭಾರತದ ಅತಿದೊಡ್ಡ BMT ಘಟಕ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. ಪ್ರಸ್ತುತ, ಭಾರತದಲ್ಲಿ 114 BMT ಕೇಂದ್ರಗಳಲ್ಲಿ ಸುಮಾರು 3000 BMT ಗಳನ್ನು ನಿರ್ವಹಿಸಲಾಗುತ್ತದೆ.
ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಇಡೀ ಕರ್ನಾಟಕ ರಾಜ್ಯದಾದ್ಯಂತ ಏಕೈಕ ಸ್ವಾಯತ್ತ ಸರ್ಕಾರಿ ಆಸ್ಪತ್ರೆಯಾಗಿದೆ, ಇದು ಸಾರ್ವಜನಿಕ ವಲಯದಲ್ಲಿ ಪೀಡಿಯಾಟ್ರಿಕ್ ಮತ್ತು ವಯಸ್ಕರಿಗೆ BMT ಸೇವೆಯನ್ನು ನೀಡುತ್ತಿದೆ.