ಬಿಜೆಪಿ 24 ಪ್ರಕೋಷ್ಠಗಳ ‘ಶಕ್ತಿ ಸಂಗಮ’ ಕಾರ್ಯಕ್ರಮಕ್ಕೆ 15 ಸಾವಿರ ಜನ ಭಾಗಿ ಸಾಧ್ಯತೆ
ಬೆಂಗಳೂರು: ರಾಜ್ಯದಲ್ಲಿ 24 ಪ್ರಕೋಷ್ಠಗಳಿದ್ದು, ಅವುಗಳ ನಿರ್ವಹಣೆಗೆ ರಾಜ್ಯ, ಜಿಲ್ಲಾ ಹಾಗೂ ಮಂಡಲ ಸಮಿತಿಗಳಿವೆ. ಭಾನುವಾರ ಬೆಂಗಳೂರಿನ ಅರಮನೆ ಮೈದಾನದ “ಗಾಯತ್ರಿ ವಿಹಾರ”ದಲ್ಲಿ ನಡೆಯುವ ‘ಶಕ್ತಿ ಸಂಗಮ’ ಕಾರ್ಯಕ್ರಮವು ಪ್ರಕೋಷ್ಠಗಳ ಮಂಡಲ, ಜಿಲ್ಲಾ ಮತ್ತು ರಾಜ್ಯ ಸಮಿತಿ ಕಾರ್ಯಕರ್ತರ ಸಮಾವೇಶವಾಗಿದೆ. ಸುಮಾರು 15 ಸಾವಿರ ಕ್ರಿಯಾಶೀಲ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಂ.ಬಿ. ಭಾನುಪ್ರಕಾಶ್ ಅವರು ತಿಳಿಸಿದ್ದಾರೆ.
“ಪ್ರಕೋಷ್ಠಗಳ ರಾಜ್ಯ ಸಮಾವೇಶದ” ಪೂರ್ವಸಿದ್ಧತೆ ಪರಿಶೀಲನೆ (ಕರ್ಟನ್ ರೈಸರ್) ಕಾರ್ಯಕ್ರಮದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟನೆ ಮಾಡುತ್ತಾರೆ. ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಾರ್ಗದರ್ಶನ ಮಾಡಲಿದ್ದಾರೆ.
ಸಮಾರೋಪ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ವಿವರಿಸಿದರು. ಸಾಂಸ್ಕೃತಿಕ ಪ್ರಕೋಷ್ಠದ ವತಿಯಿಂದ ಬೆಳಿಗ್ಗೆ 10ರಿಂದ 11ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನಗರಕ್ಕೆ ಬರುವ ಕಾರ್ಯಕರ್ತರಿಗೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಸಮಾವೇಶದ ಯಶಸ್ಸಿಗೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಕಾರ್ಯಕರ್ತರು ಬದ್ಧತೆಯಿಂದ ಕೆಲಸ ಮಾಡಲು ಅನೇಕ ರೀತಿಯ ಜವಾಬ್ದಾರಿಯನ್ನು ಕೊಡುತ್ತ ಬಂದಿದೆ. ಮೋರ್ಚಾಗಳು ಮತ್ತು ಪ್ರಕೋಷ್ಠಗಳ ಮೂಲಕ ದೇಶದಲ್ಲಿ ಬಿಜೆಪಿ ಸಂಘಟನೆಯನ್ನು ಜನಮಾನಸಕ್ಕೆ ತಲುಪಿಸುವ ಕೆಲಸವನ್ನು ಸಂಘಟಿತವಾಗಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
39 ಜಿಲ್ಲೆ, 312 ಮಂಡಲಗಳ ಪ್ರತಿನಿಧಿಗಳು
ಎಲ್ಲ ಪ್ರಕೋಷ್ಠಗಳು ವೃತ್ತಿ ಆಧರಿತ. 800 ವಕೀಲರು, 700ಕ್ಕೂ ಹೆಚ್ಚು ವೈದ್ಯರು, ಅಸಂಘಟಿತ ಕಾರ್ಮಿಕರು, ಹಾಲು ಉತ್ಪಾದಕರು ವಿಶೇóಷವಾದ ರೀತಿಯಲ್ಲಿ ಬರಲಿದ್ದಾರೆ. ಆರ್ಥಿಕ, ಕೈಗಾರಿಕಾ ಪ್ರಕೋಷ್ಠಗಳ ಗಣ್ಯರು ಬರಲಿದ್ದಾರೆ. 39 ಸಂಘಟನಾತ್ಮಕ ಜಿಲ್ಲೆ, 312 ಮಂಡಲಗಳ ಪ್ರತಿನಿಧಿಗಳು ಬರಲಿದ್ದಾರೆ ಎಂದು ಎಂ.ಬಿ. ಭಾನುಪ್ರಕಾಶ್ ಅವರು ತಿಳಿಸಿದರು.
ಬೀದರ್, ಕಲಬುರ್ಗಿ ಮತ್ತು ಯಾದಗಿರಿ ವಿಭಾಗದಿಂದ 1200 ಜನರು ವಿಶೇಷ ರೈಲಿನಲ್ಲಿ ಹೊರಟು ಬರಲಿದ್ದು, ಸಮಾವೇಶ ಮುಗಿಸಿ ರೈಲಿನಲ್ಲೇ ಹಿಂತೆರಳುವರು. ಸಮಾವೇಶದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ಬೂತ್‍ನಲ್ಲಿ ಶೇ 100 ಮತದಾನ ಮತ್ತು ಶೇ 51ರಷ್ಟು ಬಿಜೆಪಿಗೆ ಮತ ಕೊಡಿಸುವ ಸಂಕಲ್ಪ ಸ್ವೀಕರಿಸಲಿದ್ದಾರೆ ಎಂದು ವಿವರ ನೀಡಿದರು.
ಬೆಂಗಳೂರು ಕೇಂದ್ರ ಜಿಲ್ಲೆ ಅಧ್ಯಕ್ಷ ಜಿ. ಮಂಜುನಾಥ್ ಅವರು ಮಾತನಾಡಿ, ಸಮಾವೇಶದಲ್ಲಿ 60 ಅಡಿ- 40 ಅಡಿ ವೇದಿಕೆ ಸಿದ್ಧವಾಗಿದ್ದು, ಎಲ್ಲ ಕಾರ್ಯಕರ್ತರಿಗೆ ಕುರ್ಚಿ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆ ಮುಂಭಾಗದಲ್ಲಿ 1 ಸಾವಿರ ಗಣ್ಯರಿಗೆ ಆಸನ ವ್ಯವಸ್ಥೆ ಮಾಡಿದ್ದೇವೆ. ಬೆಳಿಗ್ಗೆ 5 ಸಾವಿರ ಜನರಿಗೆ ತಿಂಡಿ, ಮಧ್ಯಾಹ್ನ 15 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಿವರ ನೀಡಿದರು.
‘ತ್ರಿಪುರ ವಾಸಿನಿ’ಯಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಇದೆ. ಗಣ್ಯರಿಗೆ ವೇದಿಕೆ ಹಿಂಭಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಬಂದವರು ನೋಂದಣಿ ಮಾಡಿಕೊಂಡು ಪಾಸ್ ಪಡೆದು ಒಳಕ್ಕೆ ತೆರಳಲು ಕೋರಲಾಗಿದೆ. ಬಲ ಭಾಗದಲ್ಲಿ ವೈದ್ಯರ ತಂಡವನ್ನು ನಿಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಕೇಂದ್ರ- ರಾಜ್ಯ ಸರಕಾರಗಳ ಯೋಜನೆಗಳ ಕುರಿತು ಪ್ರದರ್ಶಿನಿಯನ್ನೂ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ತೋಟಗಾರಿಕಾ ಸಚಿವ ಎನ್. ಮುನಿರತ್ನ ಅವರು ಮಾತನಾಡಿ, ನಮ್ಮ ಪಕ್ಷದ ಮುಖಂಡರು ಮತ್ತು ಹಿರಿಯರು ಬರಲಿದ್ದಾರೆ. ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್. ರವಿಕುಮಾರ್, ಸಿದ್ದರಾಜು, ಸಹ ಸಂಯೋಜಕ ಜಯತೀರ್ಥ ಕಟ್ಟಿ, ಡಾ|| ಎ.ಹೆಚ್. ಶಿವಯೋಗಿಸ್ವಾಮಿ, ವಿಧಾನಪರಿಷತ್ ಸದಸ್ಯ ಮತ್ತು ಬೆಂಗಳೂರು ವಿಭಾಗ ಪ್ರಭಾರಿ ಹೆಚ್.ಎಸ್. ಗೋಪಿನಾಥ್ ರೆಡ್ಡಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.