ಬೆಳಗಾವಿಯಲ್ಲಿ ‘ರಾಹುಲ್ ಶಕ್ತಿ ಪ್ರದರ್ಶನ’: ಗಡಿನಾಡ ರಾಜಕೀಯದಲ್ಲಿ ಸಂಚಲನ

0

ಬೆಳಗಾವಿ: ರಾಜ್ಯ ವಿಧಾನಸಭಾ ಚುನಾವಣೆಗೆ ಅಂತಿಮ ಹಂತದ ತಯಾರಿ ನಡೆದಿರುವಾಗಲೇ ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶನ ನಡೆಸಿತು. ಇತ್ತೀಚೆಗಷ್ಟೇ ಭಾರತ ಜೋಡೋ ಯಾತ್ರೆ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದ ಎಐಸಿಸಿ ನಾಯಕ ರಾಹುಲ್ ಗಾಂಧಿ ಇಂದಿನ ಈ ‘ಯುವಕ್ರಾಂತಿ ಸಮಾವೇಶ’ದಲ್ಲಿ ಉತ್ಸಾಹಿ ಕಾಂಗ್ರೆಸ್ ಕಾರ್ಯಕರ್ತರ ಕುತೂಹಲದ ಕೇಂದ್ರಬಿಂದುವಾದರು.

ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೆಲ ತಿಂಗಳ ಹಿಂದೆ ಕರ್ನಾಟಕದ ಮೂಲಕ ಭಾರತ ಜೋಡೋ ಯಾತ್ರೆ ಸಾಗಿತ್ತು. ಈ ಯಾತ್ರೆ ಸಂದರ್ಭದಲ್ಲಿ ಎಲ್ಲ ವರ್ಗದ ಜನ ಅಭೂತಪೂರ್ವ ಬೆಂಬಲ ನೀಡಿ ನಮಗೆ ಶಕ್ತಿ ತುಂಬಿದ್ದಿರಿ, ಯಾತ್ರೆ ಯಶಸ್ಸುಗೊಳಿಸಿದ್ದಿರ. ಅದಕ್ಕಾಗಿ ನಿಮಗೆ ಧನ್ಯವಾದಗಳು. ಇಡೀ ದೇಶಕ್ಕೆ ಈ ಯಾತ್ರೆ ಸಂದೇಶ ರವಾನಿಸಿತ್ತು. ಈ ದೇಶ ಎಲ್ಲರಿಗೂ ಸೇರಿದ್ದು, ಒಂದಿಬ್ಬರ ಸ್ವತ್ತ. ಅಧಾನಿ ಅವರ ಸ್ವತ್ತಲ್ಲ. ಈ ದೇಶ ರೈತರು, ಯುವಕರು, ಬಡವರಿಗೆ ಸೇರಿದ ದೇಶವಿದೆ ಎಂದರು.‌

ನಮ್ಮ ಯಾತ್ರೆಯಲ್ಲಿ ದೊಡ್ಡ ರಥ ಇರಲಿಲ್ಲ, ಎಲ್ಲರೂ ಸಮಾನರಾಗಿ ಹೆಜ್ಜೆ ಹಾಕುತ್ತಿದ್ದರು. ಈ ಯಾತ್ರೆ ಎಲ್ಲರಿಗೂ ಭಾತೃತ್ವ ಸಂದೇಶ ನೀಡಿತ್ತು. ರಾಜ್ಯದಲ್ಲಿ ಸಿಕ್ಕ ಬೆಂಬಲ ಎಲ್ಲೆಡೆ ಸಿಕ್ಕಿತ್ತು. ದ್ವೇಷದ ಮಾರುಕಟ್ಟೆಯಲ್ಲಿ ಲಕ್ಷಾಂತರ ಮಂದಿ ಪ್ರಿತಿಯ ಅಂಗಡಿ ತೆರೆದರು ಎಂದ ರಾಹುಲ್, ಈ ಭಾಗದಲ್ಲಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂದು ಯಾತ್ರೆ ಸಮಯದಲ್ಲಿ ಯುವಕರು ತಮ್ಮ ಸಮಸ್ಯೆ ಹೇಳಿಕೊಂಡಿದ್ದರು. ರಾಜ್ಯ ಸರ್ಕಾರ ಯುವಕರಿಗೆ ಉದ್ಯೋಗ ನೀಡಲು ವಿಫಲವಾಗಿದೆ ಎಂದರು. ಕೇವಲ ಯುವಕರು ಮಾತ್ರವಲ್ಲ ರಾಜ್ಯ ಸರ್ಕಾರ ದೇಶದ ಅತ್ಯಂತ ಭ್ರಷ್ಟ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಎಲ್ಲ ವರ್ಗದವರು ಹೇಳಿದ್ದಾರೆ. ಗುತ್ತಿಗೆದಾರರ ಸಂಘ, ಶಾಲೆಗಳ ಸಂಸ್ಥೆ ಪ್ರಧಾನಿಗೆ ಪತ್ರ ಬರೆದು ಕರ್ನಾಟಕದಲ್ಲಿ 40 % ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರು ನೀಡಿದ್ದರೂ ಪ್ರಧಾನಮಂತ್ರಿಗಳು ಇದಕ್ಕೆ ಉತ್ತರ ನೀಡಿಲ್ಲ ಎಂದರು.

ಮೈಸೂರು ಸ್ಯಾಂಡಲ್ ಸೋಪ್ ಕಾರ್ಪೊರೇಷನ್‌ನಲ್ಲಿ ಹಗರಣ ನಡೆದು ಶಾಸಕನ ಪುತ್ರ ಸಿಕ್ಕಿಬಿದ್ದಾಗ 8 ಕೋಟಿ ಸಿಗುತ್ತದೆ. ಸರ್ಕಾರ ಅವರ ರಕ್ಷಣೆ ಮಾಡುತ್ತದೆ. ಪಿಎಸ್ಐ ನೇಮಕಾತಿ, ಸಹಾಯಕ ಪ್ರಾದ್ಯಾಪಕ, ಸಹಾಯಕ ಇಂಜಿನಿಯರ್ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಈ ಎಲ್ಲ ಆರೋಪ ಲಕ್ಷಾಂತರ ಯುವಕರ ದೂರಾಗಿದೆ ಎಂದವರು ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ದೆಹಲಿಯ ಸಂಸತ್ತಿನಲ್ಲಿ ನಾನು ಅದಾನಿ ಅವರ ಬಗ್ಗೆ ಮಾತನಾಡುತ್ತಾ ದೇಶದ ಎಲ್ಲ ವ್ಯಾಪಾರ ವ್ಯವಹಾರ ಅದಾನಿ ಅವರಿಗೆ ನೀಡಲಾಗುತ್ತಿದೆ. ಬಂದರು, ವಿಮಾನ ನಿಲ್ದಾಣ, ರಸ್ತೆ ಎಲ್ಲವೂ ಅವರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೂಡ ಭ್ರಷ್ಟಾಚಾರ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಯುವಕರ ಸಂಕಷ್ಟಕ್ಕೆ ಸ್ಪಂದಿಸಲು ಕಾಂಗ್ರೆಸ್ ಪಕ್ಷ ಪ್ರತಿ ಪಧವಿಧರ ನಿರುದ್ಯೋಗಿ ಯುವಕರಿಗೆ ಮಾಸಿಕ 3 ಸಾವಿರ, ಡಿಪ್ಲಮೋ ಮಾಡಿರುವ ಯುವಕರಿಗೆ 1500 ರೂ.ಗಳನ್ನು 2 ವರ್ಷಗಳ ಕಾಲ ನೀಡಲಾಗುವುದು. 10 ಲಕ್ಷ ಯುವಕರಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉದ್ಯೋಗ ನೀಡಲಿದೆ. ಇನ್ನು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಖಾಲಿ ಇರುವ 2.50 ಲಕ್ಷ ಉದ್ಯೋಗವನ್ನು ಭರ್ತಿ ಮಾಡಲಾಗುವುದು ಎಂದರು.

ಯಾತ್ರೆ ಸಮಯದಲ್ಲಿ ಮಹಿಳೆಯರು ತಮ್ಮ ಕಷ್ಟ ಹೇಳಿಕೊಂಡಿದ್ದರು. ಅವರ ಕಷ್ಟಕ್ಕೆ ಪರಿಹಾರ ನೀಡಲು ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ, ಅನ್ನ ಭಾಗ್ಯ ಯೋಜನೆ ಮೂಲಕ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ ಎಂದ ರಾಹುಲ್,  ಪರಿಶಿಷ್ಟ ಜಾತಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸುವ ವಿಚಾರವಾಗಿ ಸರ್ಕಾರ ಪೂರ್ಣಗೊಳಿಸಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣೆ ಎದುರಿಸಿ ಪ್ರಚಂಡ ಜಯಗಳಿಸಿ ಬಿಜೆಪಿ ಭ್ರಷ್ಟ ಸರ್ಕಾರವನ್ನು ಕಿತ್ತೊಗೆಯುವಂತೆ ಮಾಡಬೇಕು. ರಾಜ್ಯ ಚುನಾವಣೆ ಸಮಯದಲ್ಲಿ ನೀವು ಯಾವ ಜಿಲ್ಲೆಗೆ ಹೇಳುತ್ತೀರೋ ಅಲ್ಲಿಗೆ ನಾನು ಬರಲು ಸಿದ್ಧ. ನಾವೆಲ್ಲರೂ ಸೇರಿ ಬಿಜೆಪಿಯನ್ನು ಮಣಿಸೋಣ ಎಂದರು.

Leave a Reply

Your email address will not be published. Required fields are marked *

You may have missed