ಶತಮಾನಗಳ ಇತಿಹಾಸ ಹೊಂದಿರುವ ಬೆಂಗಳೂರು ಕರಗ
ಶತಮಾನಗಳ ಇತಿಹಾಸ ಹೊಂದಿರುವ ವಿಶ್ವ ಪ್ರಸಿದ್ಧ ಬೆಂಗಳೂರು ಕರಗ ರಾತ್ರಿ ವಿಜೃಂಭಣೆಯಿಂದ ನಡೆಯಿತು. ಚೈತ್ರ ಮಾಸದ ಹುಣ್ಣಿಮೆ ದಿನ ಕರಗ ಮಹೋತ್ಸವ ಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು.
ಜಗಮಗಿಸುತ್ತಿರುವ ದೀಪಾಲಂಕಾರ, ಸಾವಿರಾರು ಭಕ್ತಾದಿಗಳ ಮದ್ಯ ಕತ್ತಿಯಿಡಿದು ಗೋವಿಂದ ಗೋವಿಂದ ಎಂದು ಕೂಗುತ್ತಿರುವ ವೀರ ಕುಮಾರರು, ತಲೆಯ ಮೇಲೆ ಕರಗವನ್ನ ಹೊತ್ತು ಕುಣಿಯುತ್ತಿರುವ ದೇವಿ, ಈ ಅದ್ಭುತವಾದ ದೃಶ್ಯಾವಳಿ ನಗರದ ಧರ್ಮರಾಯನ ದೇವಸ್ಥಾನದ ಬಳಿ ಕಂಡು ಬಂತು.
ಶತ ಶತಮಾನಗಳಿಂದ ನಡೆದುಕೊಂಡು ಬಂದಿರುವ ಬೆಂಗಳೂರು ಕರಗ ಐತಿಹಾಸಿಕವಾಗಿ ಪ್ರಸಿದ್ದಿ ಪಡೆದಿದೆ. ವರ್ಷದ ಮೊದಲ ಮಾಸವಾದ ಚೈತ್ರ ಮಾಸದಲ್ಲಿ ನಡೆಯುವ ಕರಗವನ್ನ ಈ ಭಾರಿ ಲಕ್ಷ್ಮೀಶ ಎಂಬುವರು ಹೊತ್ತು ಈ ಐತಿಹಾಸಿಕ ಗಳಿಗೆಗೆ ಸಾಕ್ಷಿಯಾದರು.
ಧರ್ಮರಾಯನ ದೇವಸ್ಥಾನದ ಒಳಗಿನಿಂದ ಕರಗವನ್ನ ಹೊತ್ತು ತಂದು ನಗರದ ಪ್ರಮುಖ ಬೀದಿಗಳಲ್ಲಿ ತಿರುಗಾಡಿತು. ಮುಖ್ಯಾವಾಗಿ ತಿಗಳರ ಪೇಟೆ, ಚಿಕ್ಕಪೇಟೆ, ನಗರ್ತರಪೇಟೆ, ಮಾರ್ಕೆಟ್, ಮಸ್ತಾನ್ ಸಾಬ್ ದರ್ಗಾ ಸುತ್ತೆಲ್ಲಾ ತಿರುಗಾಡಿ ಬೆಳಗ್ಗಿನ ಜಾವದ ಹೊತ್ತಿಗೆ ಅಣ್ಣಮ್ಮ ದೇವಸ್ಥಾನ ತಲುಪಿತು.
ಇನ್ನು ಕರಗವನ್ನ ವೀಕ್ಷೀಸಲು ಗಣ್ಯಾತಿ ಗಣ್ಯರು ಆಗಮಿಸಿದ್ದರು. ಸಾವಿರಾರು ಭಕ್ತಾಧಿಗಳು ಸಹ ಆಗಮಿಸಿ ದ್ರೌಪದಿ ದೇವಿಯ ದರ್ಶನ ಪಡೆದು ತಮ್ಮ ತಮ್ಮ ಹರಕೆಯನ್ನ ತಿರಿಸಿಕೊಂಡರು.
ಸಚಿವ ಕೆ.ಜೆ.ಜಾರ್ಜ್ ಕೂಡ ಕರಗ ಶಕ್ತ್ಯೋತ್ಸವ ಹಾಗೂ ಶ್ರೀ ಧರ್ಮರಾಯ ಸ್ವಾಮಿ ಮಹಾ ರಥೋತ್ಸವದಲ್ಲಿ ಭಾಗವಹಿಸಿ, ದೇವ್ರ ಕೃಪೆಗೆ ಪಾತ್ರರಾದರು. ಕೇಂದ್ರ ಸಚಿವ ಅನಂತಕುಮಾರ, ಸಚಿವ ಕೆ.ಜೆ.ಜಾರ್ಜ್, ಮೇಯರ್ ಮಂಜುನಾಥ ರೆಡ್ಡಿ, ಮಮತಾ ದೇವರಾಜ್, ಬಿಬಿಎಂಪಿ ಆಯುಕ್ತ ಕುಮಾರ್ ನಾಯ್ಕ್, ಕಾರ್ಪೋರೇಟರ್ ಗಳು ಕರಗ ಮಹೋತ್ಸವದಲ್ಲಿ ಭಾಗವಹಿಸಿದರು,
ಒಟ್ಟಿನಲ್ಲಿ ರಾತ್ರಿಯಿಡಿ ನಡೆದ ವಿಶ್ವ ವಿಖ್ಯಾತ ಬೆಂಗಳೂರು ಕರಗ ನೋಡುಗರ ಕಣ್ಮನ ಸೆಳೆಯಿತು.