ಬೆಂಗಳೂರು ತ್ಯಾಜ್ಯ ಅವಾಂತರ ; ಸಚಿವರು, ಮೇಯರ್ ಗೆ ಸಾರ್ವಜನಿಕರ ತರಾಟೆ

0

ದೊಡ್ಡಬಳ್ಳಾಪುರ ತಾಲ್ಲೂಕಿನ ಟೆರಾಫಾರಂ ಮತ್ತು ಎಂಎಸ್ ಜಿಪಿ ಕಂಪನಿಗಳ ಕಸ ವಿಲೇವಾರಿ ಘಟಕಗಳನ್ನು ಸ್ಥಳಾಂತರ ಮಾಡುವಂತೆ ಆಗ್ರಹಿಸಿ ಸುತ್ತಮುತ್ತಲಿನ ಗ್ರಾಮಸ್ಥರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದಾರೆ. ಈ 2 ಕಸ ವಿಲೇವಾರಿ ಘಟಕಗಳನ್ನು ಸ್ಥಳಾಂತರ ಮಾಡುವುದಾಗಿ ಬೆಂಗಳೂರು ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ದಸರಾ ಹಬ್ಬದ ಸಂದರ್ಭದಲ್ಲಿ ಗ್ರಾಮಸ್ಥರು ಕಸ ವಿಲೇವಾರಿ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಈ ಭರವಸೆ ನೀಡಿ 2 ವಾರ ಕಳೆದರೂ ಕಸ ವಿಲೇವಾರಿ ಘಟಕಗಳನ್ನು ಸ್ಥಳಾಂತರ ಮಾಡಿಲ್ಲ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಕಸ ಸುರಿಯುತ್ತಿರುವುದರಿಂದ ಸುತ್ತಮುತ್ತಲ ಜನರು ತೊಂದರೆ ಅನುಭವಿಸುವಂತಾಗಿದೆ.

ಈ 2 ಘಟಕಗಳನ್ನು ಸ್ಥಳಾಂತರ ಮಾಡಲು ಕ್ರಮಕೈಗೊಳ್ಳದ ಕಾರಣ ಬೆಂಗಳೂರಿನಿಂದ ಬರುವ ಕಸದ ಲಾರಿಗಳಿಗೆ ಅಡ್ಡಿಪಡಿಸಲಾಗಿದೆ. ಹೀಗಾಗಿ, ಬೆಂಗಳೂರಿನ ಹಲವೆಡೆ ಕಸ ವಿಲೇವಾರಿಯಾಗದೆ ಗಬ್ಬೆದ್ದು ನಾರುತ್ತಿವೆ. ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ 2 ಘಟಕಗಳನ್ನು ಸ್ಥಳಾಂತರ ಮಾಡದಿದ್ದರೆ, ಕಸ ಸುರಿಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ.

ಕೆಲ ದಿನಗಳ ಹಿಂದೆ ಈ ಗ್ರಾಮಕ್ಕೆ ಭೇಟಿ ನೀಡಿದ್ದ ಮೇಯರ್ ಮಂಜುನಾಥ ರೆಡ್ಡಿ, ಈ ವಿಚಾರದಲ್ಲಿ ತಾವೊಬ್ಬರೇ ನಿರ್ಧಾರ ಕೈಗೊಳ್ಳುವಂತಿಲ್ಲ. ಬೆಂಗಳೂರಿನ ಉಸ್ತುವಾರಿ ಸಚಿವರೊಂದಿಗೆ ಭೇಟಿ ನೀಡಿ, ಸಮಾಲೋಚನೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಬಿಬಿಎಂಪಿ ಮೇಯರ್ ನುಡಿದಂತೆ ನಡೆದಿಲ್ಲ ಎಂದು ಆರೋಪಿಸಿ 3 ದಿನಗಳಿಂದ ಕಸದ ಲಾರಿಗಳು ಬರದಂತೆ ತಡೆಯೊಡ್ಡಿದ್ದ ಗ್ರಾಮಸ್ಥರು ಬುಧವಾರ ಹೋರಾಟವನ್ನು ತೀವ್ರಗೊಳಿಸಿದರು. ಇದರಿಂದ ತಬ್ಬಿಬ್ಬಾದ ಬೆಂಗಳೂರು ನಗರಾಭಿವೃದ್ಧಿ ಖಾತೆ ಸಚಿವ ಕೆ.ಜೆ. ಜಾರ್ಜ್ ಹಾಗೂ ಬಿಬಿಎಂಪಿ ಮೇಯರ್ ಮಂಜುನಾಥರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಗ್ರಾಮಸ್ಥರು ಈ ನಾಯಕರ ಮಾತಿಗೆ ಮರುಳಾಗಲಿಲ್ಲ. ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮಗೆ ಸುಳ್ಳು ಭರವಸೆ ನೀಡಬೇಡಿ, ವಿಷ ನೀಡಿ ಎಂದು ಸಚಿವರನ್ನು ಹಾಗೂ ಮೇಯರನ್ನು ತರಾಟೆಗೆ ತೆಗೆದುಕೊಂಡರು.

ಸಿಎಂ ಜತೆ ಚರ್ಚಿಸಿ, ಬಗೆಹರಿಸುತ್ತೇವೆ. ಸದ್ಯಕ್ಕೆ ಹೋರಾಟದಿಂದ ಹಿಂದೆ ಸರಿಯಿರಿ ಎಂದು ಸಚಿವ ಜಾರ್ಜ್ ಪರಿಪರಿಯಾಗಿ ಮನವಿ ಮಾಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಜಾರ್ಜ್, ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿದರು. ಈ ಸಂಬಂಧ ಸಿಎಂ ಜತೆ ಚರ್ಚಿಸುವುದಾಗಿಯೂ ಜಾರ್ಜ್ ಹೇಳಿದರು.

Leave a Reply

Your email address will not be published. Required fields are marked *

You may have missed