ಕಸದ ಸಮಸ್ಯೆ ; ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿ..?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಕಸದ ಸಮಸ್ಯೆ ಉದ್ಭವಿಸಿದೆ. ದೊಡ್ಡಬಳ್ಳಾಪುರ ತಾಲೂಕಿನ ಗುಂಡ್ಲಹಳ್ಳಿ ಮತ್ತು ಚಿಗರೇನಹಳ್ಳಿ ಬಳಿ ಸ್ಥಾಪಿಸಿರುವ ಟೆರ್ರಾಫಾರ್ಮಾ ಹಾಗೂ ಎಂ.ಎಸ್.ಜಿ.ಪಿ ಕಸ ವಿಲೇವಾರಿ ಘಟಕಗಳಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಮಾಡಲಾಗುತ್ತಿಲ್ಲ ಎಂದು ಆರೋಪಿಸಿ ಸುತ್ತಮುತ್ತಲ 50 ಗ್ರಾಮಗಳ ಗ್ರಾಮಸ್ಥರು ಕಸ ವಿಲೇವಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ಮುಂದುವರೆಸಿದ್ದಾರೆ. ಅಲ್ಲದೇ, ಕಸ ತುಂಬಿದ ವಾಹನಗಳು ತೆರಳದಂತೆ ರಸ್ತೆಗಳಲ್ಲೇ ಕುಳಿತಿದ್ದಾರೆ. ಹೀಗಾಗಿ ಕಸ ವಿಲೇವಾರಿಯಾಗದೇ ಸಮಸ್ಯೆ ತಲೆದೋರಿದೆ.
ಈ ಮಧ್ಯೆ, ಆಯುಧಪೂಜೆ ಹಾಗೂ ವಿಜಯದಶಮಿಯ ಹಿನ್ನೆಲೆಯಲ್ಲಿ ಮಾರುಕಟ್ಟೆ ಸೇರಿದಂತೆ ಇತರೇ ಪ್ರದೇಶಗಳಲ್ಲಿ ರಾಶಿ ರಾಶಿ ಕಸ ಶೇಖರಣೆಯಾಗುತ್ತಿದೆ. ಬೆಂಗಳೂರಿನ ಕೆಲವು ರಸ್ತೆಗಳಲ್ಲಿ ಈಗಾಗಲೇ ಕಸದ ರಾಶಿ ರಾಶಿ ಸೃಷ್ಠಿಯಾಗಿದ್ದರೆ, ಇನ್ನು ಕೆಲವೆಡೆ ಬಿಬಿಎಂಪಿ ಲಾರಿಗಳು ಕಸವನ್ನು ತುಂಬಿಕೊಂಡು ಸ್ಥಳದಲ್ಲೇ ನಿಂತಿವೆ.
ಕಸ ವಿಲೇವಾರಿ ಸಮಸ್ಯೆ ಉದ್ಭವಿಸಿರುವ ಕಾರಣ ಸಾರ್ವಜನಿಕರುಬಿಬಿಎಂಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಈಗಾಗಲೇ ಹಲವೆಡೆ ಕಸದ ಸಮಸ್ಯೆಯಿಂದ ನೊಣ-ಸೊಳ್ಳೆಗಳು ಹೆಚ್ಚಾಗಿ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗಿದೆ. ಬಿಬಿಎಂಪಿ ಅವರು ಕಸ ವಿಲೇವಾರಿ ಬಗ್ಗೆ ಆದಷ್ಟು ಬೇಗ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಬೆಂಗಳೂರು ಮತ್ತೆ ಗಾರ್ಬೇಜ್ ಸಿಟಿಯಾಗಲಿದೆ ಎಂದು ಕಿಡಿಕಾರಿದ್ದಾರೆ.
ರಾಜಧಾನಿ ಬೆಂಗಳೂರಿನ ಕಸವನ್ನು ದೂರದ ದೊಡ್ಡಬಳ್ಳಾಪುರ ಸಮೀಪದ ಗುಂಡ್ಲಹಳ್ಳಿ ಮತ್ತು ಚಿಗರೇನಹಳ್ಳಿ ಬಳಿಯ ಟೆರ್ರಾಫಾರಂ ಮತ್ತು ಎಂಎಸ್ ಜಿಸಿ ಘಟಕಗಳಲ್ಲಿ ವಿಲೇವಾರಿ ಮಾಡಲಾಗಿತ್ತಿದೆ. ಈ ಪ್ರಕ್ರಿಯೆಯೇ ಜನರ ನಿದ್ದೆಗೆಡಿಸಿದ್ದು, ಇದೀಗ ಆ ಪ್ರದೇಶದ ಜನ ರೊಚ್ಚಿಗೆದಿದ್ದಾರೆ.
ಕಸದಿಂದ ಉಂಟಾಗುವ ಕೆಮಿಕಲ್ ಮಿಶ್ರಿತ ನೀರು ಸೇರಿ ಅಂತರ್ಜಲ ಕಲುಶಿತಗೊಂಡಿದೆ. ಕೆರೆ ನೀರು ವಿಷಯುಕ್ತವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಸರ್ಕಾರ ನೀಡಿದ ಭರವಸೆಯು ಈಡೇರಿದಿದ್ದುದರಿಂದ ಮತ್ತೆ ಹೋರಾಟ ಆರಂಭಿಸುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಟೆರ್ರಾಫಾರಂ ಮತ್ತು ಎಂಎಸ್ ಜಿಸಿ ಘಟಕಗಳಲ್ಲಿ ಕಸ ವಿಲೇವಾರಿ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸುತ್ತ-ಮುತ್ತಲ 50ಕ್ಕೂ ಹೆಚ್ಚು ಗ್ರಾಮಗಳ ಜನ ಬುಧವಾರ ಪ್ರತಿಭಟನೆ ಆರಂಭಿಸಿದ್ದಾರೆ. ಕಸ ಹೊತ್ತು ಸಾಗುವ ಸುಮಾರು 600 ಲಾರಿಗಳಿಗೆ ತಡೆಯೊಡ್ಡಿದ್ದಾರೆ. ಕಲಾಳ ಗ್ರಾಮದ ಬಳಿ ಬಿಬಿಎಂಪಿಯ ಕಸದ ವಾಹನಗಳಿಗೆ ತಡೆಯೊಡ್ಡಿ ರಸ್ತೆಯನ್ನೇ ಅನಿರ್ಧಿಷ್ಟವಧಿ ಧರಣಿ ಕೈಗೊಂಡಿದ್ದಾರೆ. ಗುರುವಾರ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಆಯುಕ್ತರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರತಿಭಟನಾ ನಿರತರನ್ನು ಮನವೊಲಿಸಲು ಹರಸಾಹಸಪಟ್ಟರು ಆದರೆ ಸಮಸ್ಯೆ ಬಗೆಹರಿಯುವ ವರೆಗೂ ಸ್ಥಳದಿಂದ ಕದಡುವುದಿಲ್ಲ. ತ್ಯಾಜ್ಯ ಸಾಗನೆಗೆ ಅವಕಾಶ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ