ಸುಹಾಸ್ ಕೊಲೆ ಮಾಡಿದವರು ಇವರೇ? ಅಶೋಕ್ ಹಂಚಿಕೊಂಡ ವೀಡಿಯೋದಲ್ಲಿ ಶಂಕಿತರು?

0
Suhas Shetty Murder- Mangalore Murder case- R Asok

ಮಂಗಳೂರು: ಮಂಗಳೂರು ಹೊರವಲಯದಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಿದವರು ಯಾರು? ಎಂಬ ಚರ್ಚೆ ನಡೆದಿದೆ. ಹಂತಕರಿಗಾಗಿ ಪೊಲೀಸರು ಬೇಟೆ ಕೈಗೊಂಡಿರುವಾಗಲೇ ಕೊಲೆ ಘಟನಾ ಸ್ಥಳದ ವೀಡಿಯೊವನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಂಚಿಕೊಂಡಿದ್ದಾರೆ.

ಹಿಂದೂ ಕಾರ್ಯಕರ್ಯ ಸುಹಾಸ್ ಶೆಟ್ಟಿ ಕೊಲೆಯನ್ನು ಖಂಡಿಸಿರುವ ಆರ್.ಅಶೋಕ್, ಸಾಮಾಜಿಕ ಮಾಧ್ಯಮ ‘X’ನಲ್ಲಿ ಪೋಸ್ಟ್ ಹಾಕಿ ರಾಜ್ಯ ಹಿಂದೂಗಳಿಗೆ ಸುರಕ್ಷಿತವೇ ಎಂದು ಪ್ರಶ್ನಿಸಿದ್ದಾರೆ. ಈ ಪೋಸ್ಟ್’ನಲ್ಲಿ ಎರಡು ವೀಡಿಯೋಗಳನ್ನೂ ಹಂಚಿಕೊಂಡಿದ್ದಾರೆ. ಒಂದು ವೀಡಿಯೋದಲ್ಲಿ ಭಯಾನಕ ದಾಳಿಯ ಸನ್ನಿವೇಶ ಕಂಡು ಬಂದರೆ, ಮತ್ತೊಂದು ವೀಡಿಯೋದಲ್ಲಿ ಯುವಕರ ಗುಂಪು ತರಾತುರಿಯಲ್ಲಿ ನಿರ್ಗಮಿಸುವ ದೃಶ್ಯ ಇದೆ. ಯುವಕರನ್ನು ಸ್ಥಳದಿಂದ ಅತ್ಯಂತ ಸುರಕ್ಷಿತವಾಗಿ ಕಳುಹಿಸಿಕೊಡುವ ದೃಶ್ಯವೂ ಇದೆ.


ಈ ವೀಡಿಯೋ ಜೊತೆ ಪೋಸ್ಟ್ ಹಾಕಿರುವ ಆರ್.ಅಶೋಕ್, ‘ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕವು ಹಿಂದೂಗಳಿಗೆ ಸ್ಥಳವಲ್ಲ. ಕಾಶ್ಮೀರ ಮತ್ತು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಂತೆಯೇ, ಜನದಟ್ಟಣೆಯ ಬೀದಿಗಳಲ್ಲಿ ಹಿಂದೂಗಳನ್ನು ಗುರುತಿಸಿ ಕೊಲ್ಲಲಾಗುತ್ತಿದೆ. ಕರ್ನಾಟಕದಲ್ಲಿ ಹಿಂದೂಗಳನ್ನು ಕೊಲ್ಲಲ್ಪಟ್ಟಾಗ ಪಾಕಿಸ್ತಾನದಲ್ಲಿ ಶಾಂತಿಗಾಗಿ ಬಡಿಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೃದಯ ಮರಗಟ್ಟುತ್ತದೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಅವರ ಕ್ರೂರ ಹತ್ಯೆಯು ಕಾಂಗ್ರೆಸ್ಸಿನ ತುಷ್ಟೀಕರಣ ರಾಜಕೀಯದಿಂದಾಗಿ ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕುಸಿಯುತ್ತಿರುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ ಎಂದಿರುವ ಅಶೋಕ್, ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಒಂದು ದೊಡ್ಡ ವಿಪತ್ತು ಮತ್ತು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಅವರು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಫಲವಾಗುತ್ತಿರುವ ಕಾರಣಕ್ಕೆ ಗೃಹ ಸಚಿವ ಪರಮೇಶ್ವರ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *