RGUHS ಕುಲಪತಿಯಾಗಿ ಭ್ರಷ್ಟಾತೀತ ವ್ಯಕಿಯನ್ನೇ ನೇಮಕ ಮಾಡಿ; ಸರ್ಕಾರಕ್ಕೆ CRF ಪತ್ರ
ಬೆಂಗಳೂರು: ಹಗರಣಗಳ ಆಗರವಾಗಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಈ ಬಾರಿಯಾದರೂ ಭ್ರಷ್ಟಾಚಾರ-ಮುಕ್ತ, ಸೂಕ್ತ ವ್ಯಕ್ತಿಯನ್ನು ಕುಲಪತಿಗಳನ್ನಾಗಿ ನೇಮಕ ಮಾಡುವಂತೆ ‘ಸಿಟಿಜನ್ ರೈಟ್ಸ್ ಫೌಂಡೇಶನ್’ ಸಿಎಂ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಗೆ ಸಲಹೆ ನೀಡಿದೆ. ಈ ಸಂಬಂಧ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ಅಧ್ಯಕ್ಷ ಕೆ.ಎ.ಪಾಲ್ ಅವರು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ ಪಾಟೀಲ್ ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರಿಗೆ ಪತ್ರ ಬರೆದಿರುವ ಬೆಳವಣಿಗೆ ಕುತೂಹಲ ಕೆರಳಿಸಿದೆ.
ರಾಜ್ಯ ಸರ್ಕಾರದ ಪ್ರತಿಷ್ಠಿತ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಒಂದಿಲ್ಲೊಂದು ಹಗರಣಗಳಿಂದಾಗಿ ದೇಶದಲ್ಲೇ ವಿವಾದದ ಕೇಂದ್ರ ಬಿಂದುವಾಗುತ್ತಿದೆ. ಹತ್ತಾರು ಅಕ್ರಮ ಆರೋಪಗಳು ಸುದ್ದಿಯಾಗುತ್ತಲೇ ಇವೆ. ವೈದ್ಯಕೀಯ ಕಾಲೇಜುಗಳ ಅಕ್ರಮ, ನರ್ಸಿಂಗ್ ಕಾಲೇಜ್ ಭ್ರಷ್ಟಾಚಾರ ಪ್ರಕರಣಗಳಿಂದಾಗಿ RGUHS ಪ್ರತಿಷ್ಠೆಗೆ ಧಕ್ಕೆ ಬಂದಿದೆ. ಹಾಗಾಗಿ ಭ್ರಷ್ಟಾತೀತ, ಸಮರ್ಥ ವ್ಯಕ್ತಿಯನ್ನು ಕುಲಪತಿಯನ್ನಾಗಿ ನೇಮಕ ಮಾಡಬೇಕೆಂದು ಕೆ.ಎ.ಪಾಲ್ ಅವರು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
RGUHSನಲ್ಲಿ ನೇಮಕಾತಿ ಅಕ್ರಮಗಳು ಮಾರ್ಚ್ 2024 ರಲ್ಲಿನ ಆಂತರಿಕ ಲೆಕ್ಕಪರಿಶೋಧನೆಯು ನೇಮಕಾತಿ ದಾಖಲೆಗಳಲ್ಲಿ ಬಹಿರಂಗಗೊಂಡಿದೆ. ವಿದ್ಯಾರ್ಥಿವೇತನ, ಸಂಶೋಧನಾ ಅನುದಾನ, ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಆರೋಪಗಳೂ ಇವೆ. ಪ್ರವೇಶ ಪ್ರಕ್ರಿಯೆ ಗೋಲ್ಮಾಲ್ ಕೂಡಾ ಗಂಭೀರ ಆರೋಪಗಳಾಗಿವೆ. ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರ ವಿರುದ್ಧ ಕಾನೂನು ಹೋರಾಟ ಮಾಡುತ್ತಾ ಬಂದಿರುವ ‘ಸಿಟಿಜನ್ ರೈಟ್ಸ್ ಫೌಂಡೇಷನ್’ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಈ ಹಗರಣಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ. ಕೆಲವು ವಿಚಾರಗಳಲ್ಲಿ ಕಾನೂನು ಹೋರಾಟವನ್ನೂ ನಡೆಸಿದೆ ಎಂದು ಕೆ.ಎ.ಪಾಲ್ ಗಮನಸೆಳೆದಿದ್ದಾರೆ.
ಆರೋಗ್ಯ ವೃತ್ತಿಪರರನ್ನು ರೂಪಿಸಬೇಕಾದ ಜವಾಬ್ದಾರಿಯುತ ಪ್ರಮುಖ ಸಂಸ್ಥೆ RGUHSನ ಅವಾಂತರಗಳಿಗೆ ಭ್ರಷ್ಟ ಅಧಿಕಾರಿಗಳೇ ಕಾರಣವಾಗಿದ್ದು, ಕುಲಪತಿಗಳು ಕೂಡಾ ಅಂಥವರಿಗೆ ಬೆಂಗಾವಲಾಗಿ ನಿಂತಂತಿದೆ. ಇನ್ನಾದರೂ ವ್ಯವಸ್ಥೆ ಸುಧಾರಣೆಯಾಗಬೇಕಾದರೆ ಭ್ರಷ್ಟಾತೀತ ಹಾಗೂ ಕಳಂಕ ರಹಿತ ವ್ಯಕ್ತಿಯನ್ನು ಸರ್ಕಾರ ನೇಮಕ ಮಾಡಬೇಕಿದೆ. ಇದು ರಾಜ್ಯದ ಜನತೆಯ ಆಶಯವೂ ಆಗಿದೆ ಎಂದು ಅವರು ಪತ್ರದಲ್ಲಿ ಹೇಳಿಕೊಂಡಿದ್ದಾರೆ.
ಪ್ರಸಕ್ತ ಕುಲಪತಿಯ ಅಧಿಕಾರಾವಧಿ 10.02.2025 ರಂದು ಕೊನೆಗೊಳ್ಳಲಿದ್ದು, ಹೊಸ ನೇಮಕಾತಿ ಸಂಬಂಧ ಸರ್ಕಾರ ಅರ್ಜಿಗಳನ್ನು ಆಹ್ವಾನಿಸಿದೆ. ಮತ್ತೊಂದೆಡೆ ಹುದ್ದೆ ಬಯಸಿ ಪ್ರಭಾವಿಗಳು ಲಾಭಿ ನಡೆಸುತ್ತಿದ್ದಾರೆ. ಇಂತಹಾ ಸಂದರ್ಭದಲ್ಲಿ ಭ್ರಷ್ಟರಿಗೆ ಮನೆ ಹಾಕಿದ್ದೇ ಆದಲ್ಲಿ ವಿಶ್ವವಿದ್ಯಾಲಯದ ಬಗ್ಗೆ ಜನರಿಗೆ ಇರುವ ವಿಶ್ವಾಸ ಕಳೆದುಕೊಳ್ಳಬಹುದು ಎಂದವರು ಎಚ್ಚರಿಕೆ ನೀಡಿದ್ದಾರೆ.
RGUHSಗೆ ಭ್ರಷ್ಟಾಚಾರ-ಮುಕ್ತ, ಸೂಕ್ತ ವ್ಯಕ್ತಿಯ ಅವಶ್ಯಕತೆ ಇದ್ದು, ಕುಲಪತಿ ನೇಮಕ ಸಂದರ್ಭದಲ್ಲಿ ಲಾಭಿಗೆ ಮಣಿಯದೆ, ಅಕ್ರಮ ನೇಮಕಾತಿಗೂ ಅವಕಾಶ ಕೊಡದೆ ಅರ್ಹತೆಯನ್ನು ಖಚಿತಪಡಿಸಿಕೊಂಡು, ಶೈಕ್ಷಣಿಕ ಮತ್ತು ಸಾಂಸ್ಥಿಕ ಸುಧಾರಣೆಗಾಗಿ ಒಂದು ದೃಷ್ಟಿಕೋನವುಳ್ಳವರನ್ನೇ ನೇಮಕ ಮಾಡಬೇಕೆಂಬ ಸಲಹೆಯನ್ನು ಕೆ.ಎ.ಪಾಲ್ ಅವರು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ.