ಎಸಿಪಿಐ & ಮಂಗಳೂರು ವಿವಿ ಕ್ರೈಸ್ತ ವಿದ್ಯಾ ಪೀಠದ ವತಿಯಿಂದ 47 ನೇ ವಾರ್ಷಿಕ ಸಂಶೋಧನಾ ಸಮ್ಮೇಳನ

ಮಂಗಳೂರು: ಭಾರತೀಯ ಕ್ರೈಸ್ತ ತತ್ತ್ವಶಾಸ್ತ್ರೀಯ ಚಿಂತಕರ ಒಕ್ಕೂಟ (ಎಸಿಪಿಐ) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾ ಪೀಠದ (ಸಿಐಸಿ) ಸಹಯೋಗದಲ್ಲಿ, ಅಕ್ಟೋಬರ್ 19-21, ರವರೆಗೆ ಮಂಗಳೂರಿನ ಜೆಪ್ಪು ಸಂತ ಜೋಸೆಫರ ಇಂಟರ್‌ ಡಯಾಸಿಸನ್ ಸೆಮಿನರಿಯಲ್ಲಿ 47ನೇ ವಾರ್ಷಿಕ ತತ್ವಶಾಸ್ತ್ರ ಸಂಶೋಧನಾ ಸಮ್ಮೇಳನವನ್ನು ಆಯೋಜಿಸಲಾಗಿದೆ.

ಸಮ್ಮೇಳನದ ವಿಷಯ: “ಭರವಸೆ: ಬಹು ಆಯಾಮಗಳೊಂದಿಗೆ ತತ್ತ್ವಶಾಸ್ತ್ರೀಯ ವಿಶ್ಲೇಷಣೆ.” ಈ ವಿಷಯವು 2025 ರಲ್ಲಿ ಪೋಪ್ ಫ್ರಾನ್ಸಿಸ್ ಘೋಷಿಸಿರುವ ಜ್ಯೂಬಿಲಿ ವರ್ಷದ “ಭರವಸೆಯ ಯಾತ್ರಿಕರು” ಎಂಬ ಧ್ಯೇಯವಾಕ್ಯಕ್ಕೆ ಪೂರಕವಾಗಿದೆ ಎಂದು ವಂಗಳೂರು ವಿವಿ ಸ್ಥಳೀಯ ಸಂಯೋಜಕ ಡಾ.ಐವನ್ ಡಿಸೋಜ ಮಾಹಿತಿ ಒದಗಿಸಿದ್ದಾರೆ.

ಜಗತ್ತಿನಲ್ಲಿನ ಸಂಘರ್ಷಗಳು, ಅಸಹಿಷ್ಣುತೆ, ಪರಿಸರ ಮಾಲಿನ್ಯ ಹಾಗೂ ಹವಾಮಾನ ವೈಪರೀತ್ಯ ಮತ್ತು ಇತರ ಜಾಗತಿಕ ಸವಾಲುಗಳಿಂದ ನಲುಗಿದ ಇಂದಿನ ದಿನಗಳಲ್ಲಿ ಈ ಸಮ್ಮೇಳನವು ಭರವಸೆಯ ತಾತ್ತ್ವಿಕ ಮೌಲ್ಯಗಳನ್ನು ಮರುಪರಿಶೀಲಿಸಿ ಭವಿಷ್ಯದ ಉತ್ತಮ ಸಮಾಜವನ್ನು ಕಟ್ಟುವ ಕುರಿತು ಚಿಂತನೆ ನಡೆಸಲಿದೆ. ಮೂರು ದಿನಗಳಲ್ಲಿ ಭರವಸೆಯ ವಿವಿಧ ಆಯಾಮಗಳನ್ನು ಅವಲೋಕಿಸುವ 28 ಸಂಶೋಧನಾ ಪ್ರಬಂಧಗಳು ಭರವಸೆಯ ಸಮಾಜವನ್ನು ಕಟ್ಟಲು ಪ್ರೇರಣೆ ನೀಡಲಿವೆ ಎಂದವರು ತಿಳಿಸಿದ್ದಾರೆ.

1976ರಲ್ಲಿ ಡಾ. ರಿಚರ್ಡ್ ದೆ ಸ್ಮೆಟ್ ಮತ್ತು ಡಾ. ಆಲ್ಬರ್ಟ್ ನಂಬಿಯಪರಂಬಿಲ್ ರವರಿಂದ ಸ್ಥಾಪಿತಗೊಂಡ ಎಸಿಪಿಐ, ಭಾರತೀಯ ಕ್ರೈಸ್ತ ತತ್ತ್ವಶಾಸ್ತ್ರೀಯ ಚಿಂತನೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಪ್ರತಿಷ್ಠಿತ ಒಕ್ಕೂಟವಾಗಿದೆ. 1987-ರಲ್ಲಿ ಬಿಷಪ್ ಬಾಸಿಲ್ ಡಿ’ಸೋಜಾ ಅವರಿಂದ ಸ್ಥಾಪಿಸಲ್ಪಟ್ಟ ಮಂಗಳೂರು ವಿಶ್ವವಿದ್ಯಾನಿಲಯದ ಕ್ರೈಸ್ತ ವಿದ್ಯಾ ಪೀಠವು ತತ್ತ್ವಶಾಸ್ತ್ರ, ನೀತಿಶಾಸ್ತ್ರ, ಅಂತರ್‌ ಧರ್ಮೀಯ ಅಧ್ಯಯನಗಳನ್ನು ಉತ್ತೇಜಿಸುತ್ತಿದೆ ಮತ್ತು ಸಮಕಾಲೀನ ಸಾಮಾಜಿಕ ಮತ್ತು ಪರಿಸರ ಸಂಬಂಧಿತ ಸಮಸ್ಯೆಗಳನ್ನೂ ಚರ್ಚಿಸುತ್ತದೆ ಎಂದು ಡಾ.ಐವನ್ ಡಿಸೋಜ ತಿಳಿಸಿದ್ದಾರೆ.

ಸಮ್ಮೇಳನದಲ್ಲಿ ಈ ಕೆಳಗಿನ ಪ್ರಮುಖ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ: ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಡಾ. ಪೀಟರ್ ಪೌಲ್ ಸಲ್ದಾನ್ಹಾ,
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ, ಮಂಗಳೂರು ವಿಶ್ವವಿದ್ಯಾನಿಲಯದ ಆಂಗ್ಲ ವಿಭಾಗದ ಮುಖ್ಯಸ್ಥೆ ಡಾ. ಪರಿಣಿತಾ, ಎಸಿಪಿಐ ಅಧ್ಯಕ್ಷರು, ರೆವ. ಡಾ. ಜಾನ್ ಪೀಟರ್ ವಲ್ಲಭದಾಸ್,  ಸಂತ ಜೋಸೆಫರ ಇಂಟರ್‌ ಡಯಾಸಿಸ್‌ ಸೆಮಿನರಿಯ ರೆಕ್ಟರ್‌ ರೆವ. ಡಾ. ರೊನಾಲ್ಡ್ ಸೆರಾವೊ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ. ದೇಶಾದ ವಿವಿಧೆಡೆಯ 100ಕ್ಕೂ ಹೆಚ್ಚು ವಿದ್ವಾಂಸರು, ತಜ್ಞರು, ಚಿಂತಕರು, ಶಿಕ್ಷಕರು ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ ಎಂದು ಅವರು ಮಾಧ್ಯಮ ಪ್ರಕಾಣೆಯಲ್ಲಿ ತಿಳಿಸಿದ್ದಾರೆ.

You may have missed