ಸಾಯಿ ವೆಂಕಟೇಶ್ವರ ಕಂಪೆನಿಗೆ ಗಣಿ ಗುತ್ತಿಗೆ ಆರೋಪ; ಹೆಚ್ಡಿಕೆ ರಾಜೀನಾಮೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ ಆರೋಪದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ರಾಜೀನಾಮೆ ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಲೋಕಾಯುಕ್ತ ಅಧಿಕಾರಿಗಳು ಮಾಜಿ ಸಿಎಂ ವಿರುದ್ದ ರಾಜ್ಯಪಾಲರಿಂದ ಪ್ರಾಸಿಕ್ಯೂಶನ್ ಅನುಮತಿಗಾಗಿ ಕಾಯುತ್ತಿದ್ದಾರೆ ಎಂಬ ಸಂಗತಿ ಬಯಲಿಗೆ ಬರುತ್ತಿದ್ದಂತೆಯೇ ತಮ್ಮಿಂದ ಯಾವುದೇ ಅಕ್ರಮ ನಡೆದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡದ್ದಾರೆ. ತಾವು ಶಿಫಾರಸು ಮಾಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿರುವುದು ಎಂದು ಸ್ಪಷ್ಟನೆ ನೀಡಿದ್ದರು. ಈ ಸ್ಪಷ್ಟನೆಯನ್ನು ಮುಂದಿಟ್ಟು ಕಾಂಗ್ರೆಸ್ ಪಕ್ಷವು ಹೆಚ್ಡಿಕೆ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

‘ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ ಬಂದು ಎದೆ ಮೇಲೆ ಒದ್ದನಂತೆ“ ಎನ್ನುವ ಆಡು ಮಾತಿನಂತೆ ಕುಮಾರಸ್ವಾಮಿ ಅವರು ತಮ್ಮ ಹುಳುಕು ಹೊರಬಿದ್ದಾಗ ಎಗರಿ ಬೀಳುತ್ತಿದ್ದಾರೆ’ ಎಂದು ಸಾಮಾಜಿಕ ಜಾಲತಾಣ ‘X’ನಲ್ಲಿ ಪೋಸ್ಟ್ಬಹಾಕಿರುವ ಕಾಂಗ್ರೆಸ್, ‘ಸಾಯಿ ವೆಂಕಟೇಶ್ವರ ಕಂಪೆನಿಗೆ ಕಾನೂನುಬಾಹಿರವಾಗಿ ತಾವು ಗಣಿ ಗುತ್ತಿಗೆ ನೀಡಿದ್ದು ಏಕೆ? ನಿಮ್ಮ ಈ ಹಗರಣದ ಬಗ್ಗೆ ನಿಮ್ಮ ದೋಸ್ತಿ ನಾಯಕರಾದ ಯಡಿಯೂರಪ್ಪನವರೇ ಸದನದಲ್ಲಿ ಆರೋಪ ಮಾಡಿದ್ದಾರೆ, ಅದಕ್ಕೆ ತಮ್ಮ ಉತ್ತರವೇನು? ಲೋಕಾಯುಕ್ತದ ಪತ್ರ ಹೇಗೆ ಹೊರಬಿತ್ತು ಎಂದು ಕೇಳುವ ತಮ್ಮ ಡೋಂಗಿ ಪಾರದರ್ಶಕತೆ ಬಯಲಾಗಿದೆಯಲ್ಲವೇ?’ ಎಂದು ಪ್ರಶ್ನಿಸಿದೆ.

ಟೆಂಡರ್ ಅಧಿಕಾರಿಗಳು ಕೊಟ್ಟಿದ್ದು, ನಾನು ಕೇವಲ ರೆಕಮೆಂಡ್ ಮಾಡಿದ್ದು ಎನ್ನುತ್ತಿದ್ದೀರಿ, ಮುಖ್ಯಮಂತ್ರಿ ರೆಕಮೆಂಡ್ ಮಾಡಿದ್ದಕ್ಕೆ ಅಧಿಕಾರಿಗಳು ಮಣೆ ಹಾಕಿದ್ದಾರೆ ಎನ್ನುವುದನ್ನು ಏಕೆ ಮರೆಮಾಚುವಿರಿ? ದಶಕದ ಹಿಂದಿನ ಹಗರಣದ ವಿಷಯ ಈಗ ಕೆದಕಿದ್ದು ತಪ್ಪು ಎಂಬಂತೆ ಮಾತಾಡುತ್ತಿದ್ದೀರಿ, ದಶಕದ ಹಿಂದೆ ಸಿದ್ದರಾಮಯ್ಯನವರ ಕುಟುಂಬಕ್ಕೆ ಬಿಜೆಪಿ ಸರ್ಕಾರವೇ ಇದ್ದಾಗ ಮಂಜೂರಾದ ಸೈಟ್ ಗಳ ಬಗ್ಗೆ ತಾವು ಈಗ ಕೆದಕಿದ್ದೀರಿ, ಏಕೆ? ಈ ಹಿಂದೆ ಇದೇ ನಿಮ್ಮ ರೆಕಮೆಂಡೇಷನ್ ಸಹಿ ನನ್ನದಲ್ಲ ಎಂದು ಸುಳ್ಳು ಹೇಳಿದ್ದಿರಿ ಅಲ್ಲವೇ? ಎಂದು ಸರಣಿ ಪ್ರಶ್ನೆಗಳನ್ನು ಕಾಂಗ್ರೆಸ್ ಮುಂದಿಟ್ಟಿದೆ.

‘ನಿಮ್ಮ ಸಾಚಾತನದ ಮುಖವಾಡ ನಾಡಿನ ಜನರ ಮುಂದೆ ಕಳಚಿದೆ, ರಾಜೀನಾಮೆ ಯಾವಾಗ ಕೊಡುವಿರಿ ಎಂಬುದನ್ನು ಮೊದಲು ಸ್ಪಷ್ಟಪಡಿಸಿ’ ಎಂದು ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಪಕ್ಷ ಕೇಳಿದೆ.

You may have missed