KSRTC ಸಿಬ್ಬಂದಿಗೆ GOOD NEWS.. ಹೃದ್ರೋಗ ಚಿಕಿತ್ಸೆಗೆ ಕ್ರಮ.. ಜಯದೇವ ಆಸ್ಪತ್ರೆ ಜೊತೆ ಮಹತ್ವದ ಒಪ್ಪಂದ..

ಬೆಂಗಳೂರ : KSRTCಯ ಸಮಸ್ತ ಸಿಬ್ಬಂದಿಗೆ ಹತ್ತು ಮಾದರಿಯ ಹೃದಯ ಸಂಬಂಧಿ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಲು ಐದು ವರ್ಷಗಳ ಅವಧಿಗೆ ಶ್ರೀ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯವರೊಂದಿಗೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ.

ನಿಗಮವು “ಆರೋಗ್ಯವಂತ ನೌಕರರೇ ಸಂಸ್ಥೆಯ ಆಸ್ತಿ” ಎಂದು ಪರಿಗಣಿಸಿದೆ. ನಿಗಮದಲ್ಲಿ ಒಟ್ಟು 34000 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಆ ಪೈಕಿ 24686 ಮಂದಿ ಚಾಲಕ ಮತ್ತು ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಿಗಮದ ನೌಕರರ ಕಾರ್ಯಸ್ವರೂಪ, ಜೀವನಶೈಲಿ ಮತ್ತು ಇತರೆ ಕಾರಣಗಳಿಂದಾಗಿ ನೌಕರರಲ್ಲಿ ಹೃದಯಾಘಾತ/ ಹೃದಯ ಸಂಬಂಧಿ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ತೀರಾ ಸಾಮಾನ್ಯವಾಗಿದೆ. ಅದರಲ್ಲೂ, 40 ವರ್ಷ ಮೇಲ್ಪಟ್ಟ ಚಾಲಕರು, ನಿರ್ವಾಹಕರು ಹಾಗೂ ಇತರೆ ಸಿಬ್ಬಂದಿಗಳಲ್ಲಿ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿ ಕಂಡುಬರುತ್ತಿವೆ.

ಈ ಸಂಬಂಧ, ನಿಗಮದ ಸಮಸ್ತ ಸಿಬ್ಬಂದಿಗಳನ್ನು ಹೃದಯ ಸಂಬಂಧಿಸಿದ ನಿರ್ಧಿಷ್ಟವಾದ ಪರೀಕ್ಷೆ/ ತಪಾಸಣೆಗಳಿಗೆ ಒಳಪಡಿಸುವ ಅವಶ್ಯಕತೆ ಮನಗಂಡು, ನೌಕರರಲ್ಲಿ ಜಾಗೃತಿ/ ಅರಿವು ಮೂಡಿಸಿ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಅನುವಾಗುವ ಉದ್ದೇಶದಿಂದ ಶ್ರೀ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಹೃದಯ ಸಂಬಂಧಿ ಹತ್ತು ಇತರೆ ವೈದ್ಯಕೀಯ ತಪಾಸಣೆಗಳನ್ನು ನೌಕರರಿಗೆ ಮಾಡಿಸಲು ತೀರ್ಮಾನಿಸಿ, ಮುಂದಿನ ಐದು ವರ್ಷಗಳ ಅವಧಿಯ ಒಡಂಬಡಿಕೆಯನ್ನು ದಿನಾಂಕ: 02.11.2023 ರಂದು ಮಾಡಿಕೊಳ್ಳಲಾಯಿತು ಎಂದು ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (KSRTC) ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ.ಸಿ.ಎನ್ ಮಂಜುನಾಥ್ ರವರು ಮನುಷ್ಯನ ಆರೋಗ್ಯ ಬಹಳ ಮುಖ್ಯವಾಗಿದ್ದು, ಅದನ್ನು ಬೆಲೆ ಕೊಟ್ಟು ಕೊಂಡುಕೊಳ್ಳಲಾಗದು ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಮಾಣ ಅತಿ ಹೆಚ್ಚಳವಾಗಿದ್ದು ಚಿಕ್ಕ ವಯಸ್ಸಿನವರಲ್ಲಿಇದು ಅಧಿಕವಾಗಿದೆ. ವಯಸ್ಸಾದ ತಂದೆ ತಾಯಿಗಳು ಮಕ್ಕಳನ್ನು ಆಸ್ಪತ್ರೆಗೆ ಕರೆತರುವ ಸ್ಥಿತಿ ಎದುರಾಗಿದೆ. ಮನುಷ್ಯನ ದೇಹವೇ ಅವನ ಪ್ರಮುಖ ಬಾಳ ಸಂಗಾತಿಯಾಗಿದ್ದು ಅದನ್ನು ಯಾವುದೇ ಕಾಯಿಲೆಗಳಿಂದ ರಕ್ಷಿಸಿಕೊಳ್ಳುವುದು ಅವರ ಪ್ರಮುಖ ಜವಾಬ್ದಾರಿ ಆಗಿರುತ್ತದೆ ಎಂದರು. ಬಿಎಂಟಿಸಿಯಲ್ಲಿಯೂ ಈ ಯೋಜನೆಯಿದ್ದು, ಅಲ್ಲಿ 45 ವರುಷ ಮೇಲ್ಪಟ್ಟ ಸಿಬ್ಬಂದಿಗಳು ಈ ಯೋಜನೆಗೆ ಒಳಪಡುತ್ತಾರೆ, ಆದರೆ KSRTCಯಲ್ಲಿ 40 ವರುಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಈ ಯೋಜನೆ ಅನುಷ್ಠಾನ ಮಾಡಿರುವುದು ಒಳ್ಳೆಯದು ಏಕೆಂದರೆ ಈಗ 40 ರ ಆಸುಪಾಸಿನಲ್ಲಿಯೇ ಹೃದಯ ಸಂಬಂಧಿ ತೊಂದರೆಗಳು ಹೆಚ್ಚು ವರದಿಯಾಗುತ್ತಿವೆ ಎಂದವರು ಹೇಳಿದ್ದಾರೆ.

KSRTC ನಿಗಮವು ನಮ್ಮ ಜಯದೇವ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು ಇನ್ನು ಮುಂದೆ ಸಿಬ್ಬಂದಿಗಳ ಹೃದಯ ಸಂಬಂಧಿ ಕಾಯಿಲೆಗಳನ್ನು ಗುರುತಿಸಿ ಅಗತ್ಯ ಚಿಕಿತ್ಸೆ ಕೊಡುವ ಜವಾಬ್ದಾರಿ ನಮ್ಮ ಸಂಸ್ಥೆಯ ಮೇಲಿದ್ದು ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಪ್ರತ್ಯೇಕವಾಗಿ ತಪಾಸಣೆ ಹಾಗೂ ಚಿಕಿತ್ಸೆಗೆ ಅಗತ್ಯ ವ್ಯವಸ್ಥೆ ಮಾಡಲಾಗುವುದು. ಹಾಗೆಯೇ ನಮ್ಮ ಸಂಸ್ಥೆಯ ಮೈಸೂರಿನ ಕೇಂದ್ರದಲ್ಲಿಯೂ ಸಹ ಅಲ್ಲಿಗೆ ಸಮೀಪವಿರುವ ವಿಭಾಗಗಳ ಸಿಬ್ಬಂದಿಗಳಿಗೆ ತಪಾಸಣೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದೆಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ನಿಗಮದಲ್ಲಿ ಸೇವೆಯಲ್ಲಿ ಇರುವಾಗ ಅಪಘಾತದಲ್ಲಿ ಮೃತಪಟ್ಟ ಇಬ್ಬರು ಸಿಬ್ಬಂದಿಗಳ ಅವಲಂಬಿತರಿಗೆ ಅಪಘಾತ ವಿಮಾ ಪರಿಹಾರ ಯೋಜನೆ ಅಡಿಯಲ್ಲಿ ಒಂದು ಕೋಟಿ ಗಳ ಪರಿಹಾರ ಮೊತ್ತವನ್ನು ವಿತರಿಸಲಾಯಿತು.

ಈ ವಿಶೇಷ ವಿಮಾ ಯೋಜನೆಯ ಬಗ್ಗೆ ಡಾ.ಸಿ.ಎನ್ ಮಂಜುನಾಥ್ ರವರು ಅತೀವ ಸಂತೋಷವನ್ನು ವ್ಯಕ್ತಪಡಿಸಿ, ದೇಶದ ಯಾವುದೇ ಸಂಸ್ಥೆಗಳಲ್ಲಿ ಈ ಮಾದರಿಯ ರೂ.1 ಕೋಟಿ ವಿಮಾ ಮೊತ್ತ ಪಾವತಿಸುವ On road/Off road accident ಯೋಜನೆ ಜಾರಿಯಾಗಿಲ್ಲ. KSRTCಯು ಸಿಬ್ಬಂದಿಗಳ ಬಗ್ಗೆ ಜಾರಿಗೊಳಿಸುತ್ತಿರುವ ಹಲವು ಕಾರ್ಯಕ್ರಮಗಳನ್ನು ನಾನು ದಿನಪತ್ರಿಕೆಗಳಲ್ಲಿ ಓದಿ ತಿಳಿದುಕೊಂಡಿದ್ದೇನೆ. ನಿಗಮವು ಎರಡು ಮೂರು ದಿನಗಳ ಹಿಂದೆಯಷ್ಟೇ ರೂ 10 ಲಕ್ಷಕ್ಕೆ ಏರಿಕೆ ಮಾಡಿದ ಕುಟುಂಬ ಕಲ್ಯಾಣ ಪರಿಹಾರ ಯೋಜನೆಯೂ ಸೇರಿದಂತೆ ಸಾರಿಗೆ ಹಾಗೂ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿರವರ ನೇತೃತ್ವದಲ್ಲಿ ಬಹಳ ಒಳ್ಳೆಯ ಕಾರ್ಯಗಳು ನಡೆಯುತ್ತಿರುವುದು ಅಭಿನಂದನೀಯ ಎಂದರು.

ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಮಾತನಾಡಿ, ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ನಿಗಮವು ಒಡಂಬಡಿಕೆ ಮಾಡಿಕೊಂಡಿದ್ದು, ಹೃದಯ ಸಂಬಂಧಿ ತಪಾಸಣೆಗಳನ್ನು/ ಪರೀಕ್ಷೆಗಳನ್ನು ನಿರಂತರವಾಗಿ ಮಾಡಿಸುವುದರಿಂದ ಸಂಭವನೀಯ ಹೃದಯಾಘಾತವನ್ನು ತಪ್ಪಿಸಲು ಮತ್ತು ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ ಹಾಗೂ ಜೀವಗಳ ರಕ್ಷಣೆ ಆಗುತ್ತದೆ ಎಂದು ತಿಳಿಸಿದರು.

ಸಿಬ್ಬಂದಿಗಳು ನಿಗಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಆದ್ದರಿಂದ ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿ ಕೂಡ ಆಗಿದೆ ಎಂದು ತಿಳಿಸುತ್ತಾ *ಡಾ. ಮಂಜುನಾಥ್‌ ರವರು ಕಡಿಮೆ ದರದಲ್ಲಿ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಈ ಯೋಜನೆಯನ್ನು ಜಾರಿಗೊಳಿಸುತ್ತಿರುವುದಕ್ಕೆ ಧನ್ಯವಾದ ಸಲ್ಲಿಸಿದರು

ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ ಅನ್ಬುಕುಮಾರ್ ಮಾತನಾಡಿ ಈಗಾಗಲೇ ನಿಗಮದ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬದ ಹಿತ ದೃಷ್ಟಿಯಿಂದ ಹಲವು ಕಾಮಿಕ ಕಲ್ಯಾಣ ಕಾರ್ಯಕ್ರಮಗಳನ್ನು ನಿಗಮವು ಜಾರಿಗೆ ತಂದಿದ್ದು, ಮುಂದುವರೆದ ಭಾಗವಾಗಿ ಜಯದೇವ ಹೃದ್ರೋಗ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ 40 ವರ್ಷ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗೆ ಈ ಯೋಜನೆಯು ಉಪಯೋಗವಾಗಲಿದೆ ಎಂದರು. ತಪಾಸಣೆಗೆ ಒಳಗಾಗುವ ಪ್ರತಿ ನೌಕರರ ಪರವಾಗಿ ನಿಗಮವು ರೂ.1200/- ಗಳನ್ನು ಅಂದರೆ ವಾರ್ಷಿಕ ರೂ. 2.55 ಕೋಟಿಯನ್ನು ಜಯದೇವ ಆಸ್ಪತ್ರೆಗೆ ಪಾವತಿ ಮಾಡುತ್ತದೆ. ಈ ಯೋಜನೆಯು ಅಂದಾಜು 73% ಕಾರ್ಮಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಇಂದು ರೂ 1 ಕೋಟಿ ಚೆಕ್ಕನ್ನು ಶ್ರೀ ಮಂಜುನಾಥ ಟಿ ಸಹಾಯಕ ಸಂಚಾರ ನಿರೀಕ್ಷಕರು ಧರ್ಮಸ್ಥಳ ಘಟಕ ಪುತ್ತೂರು ವಿಭಾಗ ರವರು ದಿನಾಂಕ 17.3.2023ರಂದು ದ್ವಿಚಕ್ರದ ವಾಹನದಲ್ಲಿ ಹೋಗುವಾಗ ವಾಹನದಿಂದ ಬಿದ್ದು ಮೃತಪಟ್ಟಿರುತ್ತಾರೆ ಇವರು ನಿಗಮದಲ್ಲಿ 34 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು ಇಬ್ಬರು ಪುತ್ರರನ್ನು ಅಗಲಿರುತ್ತಾರೆ. ಹಾಗೂ ಶ್ರೀ ಶ್ರೀನಾಥ್ ಟಿ.ಬಿ ಚಾಲಕ- ನಿರ್ವಾಹಕ, ಬಿಲ್ಲೆ ಸಂಖ್ಯೆ 3973 ಘಟಕ 5, ಬೆಂಗಳೂರು ಕೇಂದ್ರ ವಿಭಾಗ ರವರು ನಿಗಮದಲ್ಲಿ 24 ವರ್ಷಗಳ ಸೇವೆಯನ್ನು ಸಲ್ಲಿಸಿದ್ದು, ದಿನಾಂಕ 04/04/2023 ರಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬೊಲೆರೋ ವಾಹನದೊಂದಿಗೆ ಡಿಕ್ಕಿಯಾಗಿ ಅಪಘಾತದಲ್ಲಿ ಮೃತಪಟ್ಟಿದ್ದು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿರುವ ಅವರ ಕುಟುಂದವರಿಗೆ ಚೆಕ್‌ ಅನ್ನು ವಿತರಿಸಲಾಯಿತು.

ಇಂದಿನ ಕಾರ್ಯಕ್ರಮದಲ್ಲಿ ಕೆಎಸ್ಸಾರ್ಟಿಸಿ ನಿರ್ದೇಶಕರು (ಸಿ ಮತ್ತು ಜಾ) ಡಾ. ನಂದಿನಿ ದೇವಿ. ಕೆ, ಸಹಿತ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

You may have missed