ದೇಶಾದ್ಯಂತ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮ

ದೇಶಾದ್ಯಂತ ಬಣ್ಣಗಳ ಹಬ್ಬ ಹೋಳಿಯ ಸಂಭ್ರಮ. ಹೋಳಿಯಾಟದಲ್ಲಿ ಮಂದಿ ಮಿಂದೆದಿದ್ದಾರೆ. ರಸ್ತೆ ರಸ್ತೆಗಳಲ್ಲಿ ಜನತೆ ಹೋಳಿಯಾಟದಲ್ಲಿ ತೊಡಗಿದ್ದಾರೆ..
ಉತ್ತರಪ್ರದೇಶದ ಮಥುರಾದಲ್ಲಿ ಹೋಳಿ ಸಂಭ್ರಮ ಮುಗಿಲು ಮುಟ್ಟಿದೆ. ನೂರಾರು ಮಂದಿ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮಿಸಿದ್ದಾರೆ. ಯುವ ಸಮೂಹವಂತೂ ಬಣ್ಣಗಳಲ್ಲೇ ತೊಯ್ದು ಹೋಗಿದ್ದು, ಹೋಳಿಯಾಟದಲ್ಲಿ ತಲ್ಲೀನರಾಗಿದ್ದಾರೆ. ಈ ಮಧ್ಯೆ, ಇಲ್ಲಿನ ದ್ವಾರಕಾದೇಶ್ ಹಾಗೂ ರಾಧ ಗೋಪಿನಾಥ್ ಜೀ ದೇವಾಲಯದಲ್ಲಿ ಇಂದು ಮುಂಜಾನೆಯೇ ಭಕ್ತರ ದಂಡೇ ನೆರೆದಿತ್ತು. ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಭಕ್ತರು, ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಪರಸ್ಪರ ಬಣ್ಣಗಳನ್ನು ಎರಚಿ ಹೋಳಿ ಶುಭಷಯ ವಿನಿಮಯ ಮಾಡಿಕೊಂಡರು. ಇದೇ ವೇಳೆ, ಯುವ ಸಮೂಹ ಕುಣಿದು ಸಂಭ್ರಮಪಟ್ಟರು.
ವಾರಣಾಸಿಯಲ್ಲಿ ಹೋಳಿ ಆಚರಣೆಯ ವಿಶೇಷ ಕಂಡುಬಂತು. ಮುಸ್ಲಿಂ ಮಹಿಳೆಯರು ಹೋಳಿಯಾಟದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದರು.
ರಾಜಸ್ಥಾನದ ಜೋಧ್ ಪುರದಲ್ಲೂ ಹೋಳಿ ಸಡಗರ ಕಂಡುಬಂದಿದೆ. ಜೋಧ್ ಪುರಕ್ಕೆ ಭೇಟಿ ನೀಡಿರುವ ವಿದೇಶಿ ಪ್ರವಾಸಿಗರು ಬಣ್ಣದ ಹಬ್ಬ ಹೋಳಿಯಲ್ಲಿ ಪಾಲ್ಗೊಂಡು ಸಂತೋಷಪಟ್ಟರು.
ಅಲಹಾಬಾದ್ ನಲ್ಲೂ ಹೋಳಿ ಆಚರಣೆ ಸಾಗಿದೆ. ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಹೋಳಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಸಾಗಿ ಮೆರವಣಿಗೆ, ವಿದ್ಯುತ್ ದೀಪಾಲಂಕಾರ ಗಮನ ಸೆಳೆಯಿತು. ಮೆರವಣಿಗೆ ವೇಳೆ ನೂರಾರು ಮಂದಿ ನೃತ್ಯ ಮಡಿ ಸಂಭ್ರಮಿಸಿದರು.
ಗುಜರಾತ್ ನಲ್ಲೂ ಹೋಳಿ ಸಂಭ್ರಮ ಗಮನ ಸೆಳೆದಿದೆ. ರಾಜ್ ಕೋಟ್ ನಲ್ಲಿ ಹೋಳಿಗೆ ಬಣ್ಣಗಳ ಖರೀದಿ ಭರ್ಜರಿಯಾಗಿ ಸಾಗಿದೆ. ಈ ಬಾರಿ ಮಾರುಕಟ್ಟೆಗೆ ಹರ್ಬಲ್ ಬಣ್ಣಗಳು ಎಂಟ್ರಿ ಕೊಟ್ಟಿವೆ. ರಾಸಾಯನಿಕ ಬಳಸಿ ತಯಾರಿಸಿದ ಬಣ್ಣಗಳ ಬಳಕೆಯಿಂದ ಚರ್ಮಕ್ಕೆ ಹಾನಿಯುಂಟಾಗುವುದರಿಂದ ಈ ಬಾರಿ ಹರ್ಬಲ್ ಬಣ್ಣಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಈ ಹರ್ಬಲ್ ಕಲರ್ಸ್ ಗೆ ಎಲ್ಲಿಲ್ಲದ ಬೇಡಿಕೆ ಬಂದೊದಗಿದೆ.ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವಿರುವ ಬಾಕ್ಸ್ ಗಳಲ್ಲಿ ಬಣ್ಣಗಳ ಮಾರಾಟ ಈ ಬಾರಿ ಹೋಳಿಯ ಮತ್ತೊಂದು ವಿಶೇಷತೆಯಾಗಿದೆ. ಇದರೊಂದಿಗೆ ಹೊಸ ಹೊಸ ಮಾದರಿಯ ಪಿಚಕಾರಿಗಳು ಗಮನ ಸೆಳೆಯುತ್ತಿವೆ.
ಒಟ್ಟಾರೆ, ಬಣ್ಣದ ಹಬ್ಬ ಎಲ್ಲೆಡೆ ರಂಗು ತರಿಸಿದ್ದು, ಹೋಳಿಯಾಟ ಖುಷಿ ತರಿಸಿದೆ.