ರಷ್ಯಾದ ಸರಕು ಹಡಗಿನ ಮೇಲೆ ಡ್ರೋನ್ ದಾಳಿ: ಸಿಬ್ಬಂದಿ ಸ್ಥಳಾಂತರ

ಹೆಲ್ಸಿಂಕಿ: ರಷ್ಯಾದ ಕಲಿನಿನ್ಗ್ರಾಡ್ಗೆ ತೆರಳುತ್ತಿದ್ದ ‘ಸ್ಪಾರ್ಟಾ II’ ಸರಕು ಹಡಗಿನ ಮೇಲೆ ಫಿನ್ಲ್ಯಾಂಡ್ ಕೊಲ್ಲಿಯ ಪೂರ್ವ ಭಾಗದಲ್ಲಿ ಡ್ರೋನ್ ದಾಳಿ ನಡೆದಿದೆ. ದಾಳಿಯಿಂದ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ಅದು ಫಿನ್ಲ್ಯಾಂಡ್ ಜಲಪ್ರದೇಶಕ್ಕೆ ತೇಲಿಹೋಗಿದೆ.
ದಾಳಿಯ ಹಿಂದೆ ಉಕ್ರೇನ್ ಕೈವಾಡ ಇರುವ ಸಾಧ್ಯತೆಯಿದೆ ಎಂದು ಫಿನ್ಲ್ಯಾಂಡ್ ರಕ್ಷಣಾ ಪಡೆಗಳು ಶಂಕಿಸಿವೆ. ಆದರೆ, ಉಕ್ರೇನ್ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ. ಎರಡು ಡ್ರೋನ್ಗಳನ್ನು ಬಳಸಿರುವ ಸಾಧ್ಯತೆಯಿದೆ ಎಂದು ಕಲಿನಿನ್ಗ್ರಾಡ್ ಗವರ್ನರ್ ಅಲೆಕ್ಸಿ ಬೆಸ್ಪ್ರೊಜ್ವಾನ್ನಿಖ್ ತಿಳಿಸಿದ್ದಾರೆ. ಪ್ರದೇಶದ ಸರಬರಾಜಿಗೆ ಯಾವುದೇ ಅಪಾಯವಿಲ್ಲ ಎಂದಿದ್ದಾರೆ.

ಅಮೆರಿಕ 2022ರಲ್ಲಿ ಹಾಗೂ ಉಕ್ರೇನ್ ಈ ವರ್ಷದ ಆರಂಭದಲ್ಲಿ ಹಡಗಿಗೆ ನಿರ್ಬಂಧ ವಿಧಿಸಿದ್ದವು. ಘಟನೆಯ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿ ವಿಮಾನ ಮತ್ತು ಸಮುದ್ರ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು.
ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಮತ್ತೊಂದು ರಷ್ಯಾದ ಹಡಗಿಗೆ ಸ್ಥಳಾಂತರಿಸಲಾಗಿದೆ ಎಂದು ಫಿನ್ಲ್ಯಾಂಡ್ ಗಡಿ ಕಾವಲು ಪಡೆ ತಿಳಿಸಿದೆ.
