ಬೇಡಿಕೆ ಈಡೇರಿಸಲು ಒಪ್ಪದ ಸರ್ಕಾರ, ಪಟ್ಟು ಸಡಿಲಿಸಲು ‘ಆಶಾ’ ನಕಾರ; ಅರೋಗ್ಯ ಕಾರ್ಯಕತೆಯರ ಸಮಸ್ಯೆ ಮತ್ತಷ್ಟು ಜಟಿಲ

ಬೆಂಗಳೂರು: ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಮುಂದುವರಿದಿದೆ. ಪ್ರತಿಭಟನೆ ಹಿಂಪಡೆಯುವಂತೆ ಮನವೊಲಿಸಲು ಆರೋಗ್ಯ ಸಚಿವ ಯು.ಟಿ. ಖಾದರ್ ನಡೆಸಿದ ಸಭೆ ವಿಫಲವಾಗಿದೆ.
ಆಶಾ ಕಾರ್ಯಕರ್ತೆಯರ ಹಿತ ಕಾಯುವುದು ಸರ್ಕಾರದ ಕರ್ತವ್ಯ. ಅವರ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಸಚಿವರು ಭರವಸೆ ನೀಡಿದರು. ಈಗಾಗಲೇ ಮುಖ್ಯಮಂತ್ರಿ ಸಭೆ ನಡೆಸಿದ್ದು, ಸಮಸ್ಯೆ ಬಗೆಹರಿಸಲು ಸ್ವಲ್ಪ ಸಮಯ ಕೇಳಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ ಅಧಿವೇಶನದ ಕೊನೆಯಲ್ಲಿ ಗೌರವಧನ ಹೆಚ್ಚಳದ ಕುರಿತು ಚರ್ಚಿಸಿ ಸಿಹಿ ಸುದ್ದಿ ನೀಡುವುದಾಗಿ ಖಾದರ್ ಹೇಳಿದರು. 2014ರ ನಿರ್ಧಾರದಂತೆ ಕೇಂದ್ರ ಸರ್ಕಾರ ಗೌರವಧನ ಹೆಚ್ಚಿಸಿದಷ್ಟೇ ಮೊತ್ತವನ್ನು ರಾಜ್ಯ ಸರ್ಕಾರವೂ ಹೆಚ್ಚಿಸುತ್ತಿದೆ. ಕೇಂದ್ರ ₹1,000 ಹೆಚ್ಚಿಸಿದಾಗ ರಾಜ್ಯವೂ ಅಷ್ಟೇ ಮೊತ್ತ ಹೆಚ್ಚಿಸಿತ್ತು ಎಂದು ವಿವರಿಸಿದರು.
ಅಧಿವೇಶನದಲ್ಲಿ ಯಾವ ಘೋಷಣೆ ಮಾಡಬೇಕು ಎಂಬುದನ್ನು ಡಿ.ಕೆ. ಶಿವಕುಮಾರ್ ನಿರ್ಧರಿಸಲಿದ್ದಾರೆ ಎಂದರು. ಆದರೆ ಸಚಿವರ ಭರವಸೆಗೆ ಒಪ್ಪದ ಆಶಾ ಕಾರ್ಯಕರ್ತೆಯರು, ಬೇಡಿಕೆಗಳು ಈಡೇರುವವರೆಗೂ ಹೋರಾಟ ಮುಂದುವರಿಸುವುದಾಗಿ ಪಟ್ಟು ಹಿಡಿದಿದ್ದಾರೆ.
ಸಭೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘಟನೆಯ ಅಧ್ಯಕ್ಷ ಕೆ. ಸೋಮಶೇಖರ್, ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.
