ಪ್ರೇಮ್ ನಜೀರ್ ಪರಂಪರೆಗೆ IFFI 2026 ಗೌರವ: ಹೊಸ ತಲೆಮಾರಿನ ಮಲಯಾಳಂ ಚಿತ್ರಗಳ ಪ್ರದರ್ಶನ

0
IFFI-2026-celebrates-Malayalam-Cinema

ಪಣಜಿ: ಮಲಯಾಳಂ ಚಿತ್ರರಂಗದ ದಂತಕಥೆ ಪ್ರೇಮ್ ನಜೀರ್ ಅವರ ಪರಂಪರೆಯನ್ನು ಸ್ಮರಿಸುವುದರ ಜತೆಗೆ ಸಮಕಾಲೀನ ಮಲಯಾಳಂ ಸಿನಿಮಾಗಳನ್ನು ಪರಿಚಯಿಸಲು 57ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (IFFI) ಸಜ್ಜಾಗಿದೆ. ನವೆಂಬರ್ 20ರಿಂದ 28ರವರೆಗೆ ಗೋವಾದಲ್ಲಿ ನಡೆಯುವ ಉತ್ಸವದಲ್ಲಿ ಪ್ರೇಮ್ ನಜೀರ್ ಅವರ ಶತಮಾನೋತ್ಸವದ ಅಂಗವಾಗಿ ‘ತುಲಾಭಾರಂ’ ಚಿತ್ರ ಪ್ರದರ್ಶನಗೊಳ್ಳಲಿದೆ.

ಸಮಕಾಲೀನ ವಿಭಾಗದಲ್ಲಿ ಅಖಿಲ್ ಸತ್ಯನ್ ನಿರ್ದೇಶನದ, ನಿವಿನ್ ಪೌಲಿ, ಅಜು ವರ್ಗೀಸ್, ರಿಯಾ ಶಿಬು ಮತ್ತು ಪ್ರೀತಿ ಮುಕುಂದನ್ ನಟಿಸಿರುವ ‘ಸರ್ವಂ ಮಾಯಾ’ ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಗಿದೆ.

ನ್ಯೂ ಹಾರಿಜಾನ್ ವಿಭಾಗದಲ್ಲಿ ಶ್ರುತಿ ಶರಣ್ಯಂ ಅವರ ‘ಒಂಟಂಜಾವಲ್ಮರಮ್’ ಮತ್ತು ಶ್ರೀಹರಿ ಹರಿದಾಸ್ ಅವರ ‘ಅಜಯಂತೆ ಮರಣಂ: ಒರು ಕೇಸ್ ಸ್ಟಡಿ’ ಪ್ರದರ್ಶನಗೊಳ್ಳಲಿವೆ. ಸಂದೀಪ್ ಫ್ರಾನ್ಸಿಸ್ ಅವರ ಕಿರುಚಿತ್ರ ‘ಸ್ವಿಚ್ ಆಫ್’ ನಾನ್-ಫೀಚರ್ ವಿಭಾಗದಲ್ಲಿ ಹಾಗೂ ಸಮ್ಜಾದ್ ಅವರ ‘ಹಾಫ್ ಗಾಲಾ’ ಪ್ರೀಮಿಯರ್ಸ್ ವಿಭಾಗದಲ್ಲಿ ಸ್ಥಾನ ಪಡೆದಿವೆ.

ನಟ-ನಿರ್ದೇಶಕ ಬಾಸಿಲ್ ಜೋಸೆಫ್ ಪುರಾಣಗಳು ಮತ್ತು ಸೂಪರ್ ಹೀರೋಗಳ ಕುರಿತು ಸಂವಾದದಲ್ಲಿ ಭಾಗವಹಿಸಲಿದ್ದಾರೆ. ಹಿನ್ನೆಲೆ ಗಾಯಕಿ ಕೆ.ಎಸ್. ಚಿತ್ರಾ ಅವರು ಆಶಾ ಭೋಸ್ಲೆ ಮತ್ತು ಎಸ್. ಜಾನಕಿ ಅವರಿಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಮುನ್ನಡೆಸಲಿದ್ದಾರೆ.

‘ಸ್ಟೋರೀಸ್ ವಿದೌಟ್ ಬಾರ್ಡರ್ಸ್’ ವಿಷಯದಡಿ ನಡೆಯುವ ಉತ್ಸವವು ದೇಶ-ವಿದೇಶಗಳ ಚಿತ್ರರಂಗದ ಗಣ್ಯರು ಮತ್ತು ಸಿನಿಮಾ ಪ್ರೇಮಿಗಳನ್ನು ಒಗ್ಗೂಡಿಸಲಿದೆ.

Leave a Reply

Your email address will not be published. Required fields are marked *