ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರಿಕೆ: ರೈಲು ನಿಲ್ದಾಣದಲ್ಲಿ ಸಾವು-ನೋವು, ಕಠಿಣ ನಿರ್ಬಂಧಕ್ಕೆ ಝೆಲೆನ್ಸ್ಕಿ ಆಗ್ರಹ

ಡಿನಿಪ್ರೊ : ಮಧ್ಯ ಉಕ್ರೇನ್‌ನ ಡಿನಿಪ್ರೊ ನಗರದ ರೈಲು ನಿಲ್ದಾಣದ ಮೇಲೆ ಗುರುವಾರ ರಷ್ಯಾ ನಡೆಸಿದ ಜೆಟ್ ಚಾಲಿತ ಡ್ರೋನ್ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದು, 10 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರ ರೈಲುಗಳ ಮೇಲೆ ನಡೆದ ಈ ದಾಳಿಯನ್ನು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಭೀಕರ ದಾಳಿ ಎಂದು ಬಣ್ಣಿಸಿದ್ದಾರೆ.
ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ಪ್ರಯಾಣಿಕರ ರೈಲುಗಳು ನಿಂತಿದ್ದ ಸಂದರ್ಭದಲ್ಲಿ ರಷ್ಯಾದ ಡ್ರೋನ್‌ಗಳು ದಾಳಿ ನಡೆಸಿವೆ. ದಾಳಿಯ ಪರಿಣಾಮ ಎರಡು ರೈಲುಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಝೆಲೆನ್ಸ್ಕಿ, ಗಾಯಾಳುಗಳಿಗೆ ನೆರವು ನೀಡಲು ತುರ್ತು ಸೇವೆಗಳ ಸಿಬ್ಬಂದಿ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಪ್ರಯಾಣಿಕರ ರೈಲುಗಳ ಮೇಲೆ ನಡೆದ ದಾಳಿ ನಾಗರಿಕರ ಜೀವಕ್ಕೆ ಅಪಾಯ ತಂದಿದೆ ಎಂದು ಹೇಳಿದ್ದಾರೆ. ದಾಳಿಯಿಂದಾಗಿ ರೈಲು ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ರಕ್ಷಣಾ ಕಾರ್ಯಾಚರಣೆಗಳು ಮುಂದುವರಿದಿವೆ.

ರಷ್ಯಾ ವಿರುದ್ಧ ಝೆಲೆನ್ಸ್ಕಿ ವಾಗ್ದಾಳಿ
ರಷ್ಯಾದ ಕೆಲವು ಪ್ರಭಾವಿ ಉದ್ಯಮಿಗಳು ಹಾಗೂ ಇಂಧನ ವಲಯದ ಮೇಲಿನ ನಿರ್ಬಂಧಗಳನ್ನು ಸಡಿಲಿಸಿದ ಬಳಿಕವೂ ದಾಳಿಗಳು ಮುಂದುವರಿದಿರುವುದನ್ನು ಝೆಲೆನ್ಸ್ಕಿ ಪ್ರಶ್ನಿಸಿದ್ದಾರೆ. ಉದ್ವಿಗ್ನತೆಯನ್ನು ಕಡಿಮೆ ಮಾಡುವ ಬದಲು ರಷ್ಯಾ ಉಕ್ರೇನ್ ಜನರ ಮೇಲೆ ಮತ್ತಷ್ಟು ದಾಳಿಗಳನ್ನು ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ರಷ್ಯಾದ ಆಕ್ರಮಣಕಾರಿ ನಡೆಗೆ ಅಮೆರಿಕ ಮತ್ತು ಯುರೋಪ್ ನ್ಯಾಯಯುತ ಹಾಗೂ ನಿರ್ಣಾಯಕ ಕ್ರಮ ಕೈಗೊಳ್ಳಬೇಕು ಎಂದು ಉಕ್ರೇನ್ ನಿರಂತರವಾಗಿ ಒತ್ತಾಯಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಯುದ್ಧ ಮುಂದುವರಿಯುವವರೆಗೆ ರಷ್ಯಾ ಮತ್ತು ಅದರ ಯುದ್ಧ ವ್ಯವಸ್ಥೆಯ ಮೇಲಿನ ನಿರ್ಬಂಧಗಳನ್ನು ಸಡಿಲಿಸಬಾರದು ಎಂಬುದು ಅವರ ನಿಲುವಾಗಿದೆ.
ಯುರೋಪಿಯನ್ ಒಕ್ಕೂಟ (EU), ಅಮೆರಿಕ ಮತ್ತು ಜಿ7 (G7) ರಾಷ್ಟ್ರಗಳು ರಷ್ಯಾದ ವಿರುದ್ಧ ಹೊಸ ಹಾಗೂ ಕಠಿಣ ನಿರ್ಬಂಧಗಳನ್ನು ವಿಧಿಸಬೇಕಾದ ಸಮಯ ಬಂದಿದೆ ಎಂದು ಝೆಲೆನ್ಸ್ಕಿ ಆಗ್ರಹಿಸಿದ್ದಾರೆ. ಉಕ್ರೇನ್‌ಗೆ ಬೆಂಬಲ ನೀಡುತ್ತಿರುವ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ.
