ವ್ಯಾಪಾರ, ತಂತ್ರಜ್ಞಾನ, ನಾವೀನ್ಯತೆ: ಭಾರತ-ಸ್ವಿಟ್ಜರ್ಲೆಂಡ್ ಸಹಕಾರಕ್ಕೆ ಒತ್ತು

ನವದೆಹಲಿ: ವ್ಯಾಪಾರ, ಹೂಡಿಕೆ, ವಿಜ್ಞಾನ-ತಂತ್ರಜ್ಞಾನ, ನಾವೀನ್ಯತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆಗಳ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಸ್ವಿಸ್ ಒಕ್ಕೂಟದ ಅಧ್ಯಕ್ಷ ಗೈ ಪಾರ್ಮೆಲಿನ್ ಚರ್ಚಿಸಿದರು.
ಸೋಮವಾರ ರಾಷ್ಟ್ರಪತಿ ಭವನದಲ್ಲಿ ಪಾರ್ಮೆಲಿನ್ ಅವರನ್ನು ಆತಿಥ್ಯ ವಹಿಸಿದ ರಾಷ್ಟ್ರಪತಿ ಮುರ್ಮು, ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಳ್ವಿಕೆಯಂತಹ ಸಾಮಾನ್ಯ ಮೌಲ್ಯಗಳ ಆಧಾರದ ಮೇಲೆ ಭಾರತ ಮತ್ತು ಸ್ವಿಟ್ಜರ್ಲೆಂಡ್ ಆತ್ಮೀಯ ಹಾಗೂ ಸೌಹಾರ್ದಯುತ ಸಂಬಂಧ ಹೊಂದಿವೆ ಎಂದು ಹೇಳಿದರು.
ಉಭಯ ದೇಶಗಳ ದ್ವಿಪಕ್ಷೀಯ ಸಹಕಾರವು ವ್ಯಾಪಾರ ಮತ್ತು ಹೂಡಿಕೆ ಮಾತ್ರವಲ್ಲದೆ ವಿಜ್ಞಾನ ಮತ್ತು ತಂತ್ರಜ್ಞಾನ, ನಾವೀನ್ಯತೆ, ಸಂಸ್ಕೃತಿ ಹಾಗೂ ಜನರಿಂದ ಜನರ ನಡುವಿನ ಬಾಂಧವ್ಯವನ್ನೂ ಒಳಗೊಂಡಿದೆ ಎಂದು ಅವರು ತಿಳಿಸಿದರು.

ಸ್ವಿಟ್ಜರ್ಲೆಂಡ್‌ನ್ನು ಭಾರತದ ಪ್ರಮುಖ ವ್ಯಾಪಾರ ಮತ್ತು ಹೂಡಿಕೆ ಪಾಲುದಾರ ಎಂದು ಬಣ್ಣಿಸಿದ ಮುರ್ಮು, ಭಾರತ-ಯುರೋಪಿಯನ್ ಮುಕ್ತ ವ್ಯಾಪಾರ ಸಂಘದ (EFTA) ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದದ ಅನುಷ್ಠಾನದಿಂದ ಆರ್ಥಿಕ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದರು.
ಭಾರತದಲ್ಲಿ ಸ್ವಿಸ್ ಕಂಪನಿಗಳ ಹೆಚ್ಚುತ್ತಿರುವ ಉಪಸ್ಥಿತಿಯನ್ನು ರಾಷ್ಟ್ರಪತಿ ಉಲ್ಲೇಖಿಸಿದರು. ರಸ್ತೆ, ರೈಲ್ವೆ ಸೇತುವೆ ಮತ್ತು ಸುರಂಗ ಸೇರಿದಂತೆ ಮೂಲಸೌಕರ್ಯ ಕ್ಷೇತ್ರಗಳಲ್ಲಿನ ಸಹಭಾಗಿತ್ವದ ಜತೆಗೆ, ಸ್ವಚ್ಛ ಮತ್ತು ಹಸಿರು ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯಂತಹ ಉದಯೋನ್ಮುಖ ಕ್ಷೇತ್ರಗಳಲ್ಲೂ ಸ್ವಿಸ್ ಸಂಸ್ಥೆಗಳು ಹೆಚ್ಚಿನ ಅವಕಾಶಗಳನ್ನು ಅನ್ವೇಷಿಸಬಹುದು ಎಂದು ಹೇಳಿದರು.
ಪಾರ್ಮೆಲಿನ್ ಅವರ ಭೇಟಿಯ ಸಂದರ್ಭದಲ್ಲಿ ವಲಸೆ ಮತ್ತು ಚಲನಶೀಲತೆ, ಸಂಶೋಧನೆ ಹಾಗೂ ತಂತ್ರಜ್ಞಾನ ವರ್ಗಾವಣೆಗೆ ಸಂಬಂಧಿಸಿದಂತೆ ಸಹಿ ಮಾಡಲಾದ ಒಪ್ಪಂದಗಳನ್ನು ಮುರ್ಮು ಸ್ವಾಗತಿಸಿದರು.
ಭಾರತ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ನಿಕಟ ಸಹಕಾರವು ಎರಡೂ ದೇಶಗಳ ಜನರಿಗೆ ಪ್ರಯೋಜನಕಾರಿಯಾಗುವುದರ ಜತೆಗೆ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲಿದೆ ಎಂದು ಉಭಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದರು.
ಸ್ವಿಸ್ ಅಧ್ಯಕ್ಷ ಗೈ ಪಾರ್ಮೆಲಿನ್ ಅವರ ಗೌರವಾರ್ಥ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ಔತಣಕೂಟವನ್ನೂ ಆಯೋಜಿಸಿದರು.
