ಹೊಸ ಹೆಲಿಕಾಪ್ಟರ್ ಹಸ್ತಾಂತರ; ಭಾರತ ವಾಯುಪಡೆಗೆ ಭೀಮ ಬಲ;

0
HAL-Dhruv-NG-Helicoptor

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಭಾರತೀಯ ವಾಯುಪಡೆಗೆ (IAF) ಎರಡು LCA ತೇಜಸ್ FOC ಅವಳಿ ಆಸನದ ತರಬೇತುದಾರ ವಿಮಾನಗಳು ಹಾಗೂ ಮೂರು HTT-40 ಮೂಲ ತರಬೇತುದಾರ ವಿಮಾನಗಳನ್ನು ಹಸ್ತಾಂತರಿಸಿದೆ. ಇದೇ ವೇಳೆ ನಾಲ್ಕು ಧ್ರುವ್ ನೆಕ್ಸ್ಟ್ ಜನರೇಷನ್ (NG) ಹೆಲಿಕಾಪ್ಟರ್‌ಗಳನ್ನು ಪವನ್ ಹ್ಯಾನ್ಸ್ ಲಿಮಿಟೆಡ್‌ಗೆ ವಿತರಿಸಲಾಯಿತು.

ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರ ಸಮ್ಮುಖದಲ್ಲಿ ಈ ಹಸ್ತಾಂತರ ನಡೆಯಿತು.

ಭಾರತದ ಸ್ವದೇಶಿ ಏರೋಸ್ಪೇಸ್ ಸಾಮರ್ಥ್ಯ ಹಾಗೂ ತಾಂತ್ರಿಕ ಸ್ವಾವಲಂಬನೆ ಬಲಪಡಿಸುವ ನಿಟ್ಟಿನಲ್ಲಿ ಈ ವಿತರಣೆ ಮಹತ್ವದ ಹೆಜ್ಜೆ ಎಂದು ರಾಜನಾಥ್ ಸಿಂಗ್ ಬಣ್ಣಿಸಿದರು.

ವಿಮಾನ ವಿನ್ಯಾಸ, ಏವಿಯಾನಿಕ್ಸ್, ಪ್ರೊಪಲ್ಷನ್, ಕಾಂಪೋಸಿಟ್ಸ್, ಫ್ಲೈಟ್ ಕಂಟ್ರೋಲ್ ವ್ಯವಸ್ಥೆ, ಉತ್ಪಾದನೆ ಮತ್ತು ಪ್ರಮಾಣೀಕರಣ ಸೇರಿದಂತೆ ಏರೋಸ್ಪೇಸ್‌ನ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಸಾಮರ್ಥ್ಯ ವೃದ್ಧಿಸುವ ಅಗತ್ಯವಿದೆ ಎಂದರು.

LCA ತೇಜಸ್ FOC ತರಬೇತುದಾರವು ಯುದ್ಧ ಕಾರ್ಯಾಚರಣೆಗಳಿಗೆ ಪೈಲಟ್‌ಗಳ ತರಬೇತಿಗೆ ನೆರವಾಗಲಿದೆ. ದೇಶೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ HTT-40 ಸಶಸ್ತ್ರ ಪಡೆಗಳ ಮೂಲ ತರಬೇತಿ ಅಗತ್ಯಗಳನ್ನು ಪೂರೈಸುವುದರ ಜತೆಗೆ ರಫ್ತು ಸಾಮರ್ಥ್ಯವನ್ನೂ ಹೊಂದಿದೆ ಎಂದು ಸಚಿವರು ಹೇಳಿದರು.

ನಾಗರಿಕ ಹೆಲಿಕಾಪ್ಟರ್ ವಿಭಾಗದಲ್ಲಿ ದೇಶೀಯ ಸಾಮರ್ಥ್ಯ ವೃದ್ಧಿಗೆ ಧ್ರುವ್ NG ಪ್ರಮುಖ ಉದಾಹರಣೆಯಾಗಿದೆ. ನಾಗರಿಕ ಕಾರ್ಯಾಚರಣೆಗಳಲ್ಲಿ ಇದರ ಪ್ರಮಾಣೀಕರಣ ಮತ್ತು ಬಳಕೆ ಭಾರತದ ನಾಗರಿಕ ವಿಮಾನಯಾನ ಪರಿಸರ ವ್ಯವಸ್ಥೆಗೆ ಮಹತ್ವದ ಹೆಜ್ಜೆ ಎಂದು ರಾಮಮೋಹನ್ ನಾಯ್ಡು ಹೇಳಿದರು.

ಏರೋಸ್ಪೇಸ್ ಯೋಜನೆಗಳಲ್ಲಿ ವಿಳಂಬ, ವೆಚ್ಚ ಏರಿಕೆ ಮತ್ತು ತಾಂತ್ರಿಕ ಬಳಕೆಯಲ್ಲದಂತಾಗುವಿಕೆ ತಪ್ಪಿಸಲು ವಾಸ್ತವಿಕ ಸಮಯಸೂಚಿ ರೂಪಿಸಬೇಕು ಎಂದು ರಾಜನಾಥ್ ಸಿಂಗ್ HALಗೆ ಸೂಚಿಸಿದರು.

HAL ಸಿಎಂಡಿ ರವಿ ಕೆ., ರಕ್ಷಣಾ ಹಾಗೂ ನಾಗರಿಕ ಕ್ಷೇತ್ರಗಳಿಗೆ ಅಗತ್ಯವಾದ ವೇದಿಕೆಗಳನ್ನು ಅಭಿವೃದ್ಧಿಪಡಿಸುವ ಸಂಸ್ಥೆಯ ಸಾಮರ್ಥ್ಯವನ್ನು ಈ ವಿತರಣೆಗಳು ಪ್ರದರ್ಶಿಸಿವೆ ಎಂದರು.

ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಸೇರಿದಂತೆ ರಕ್ಷಣಾ ಮತ್ತು ನಾಗರಿಕ ವಿಮಾನಯಾನ ಕ್ಷೇತ್ರದ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *