KPSC ಹಗರಣ; ಜ್ಞಾನೇಂದ್ರ ಕನ್ನಾಳೆ ED ವಶಕ್ಕೆ; ಹಣದ ವಹಿವಾಟು, ಆಸ್ತಿ ಕುರಿತ ತನಿಖೆ ತೀವ್ರ

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ (ED), ಅಮಾನತುಗೊಂಡಿರುವ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲೇ ಬಂಧಿಸಿ ತನ್ನ ವಶಕ್ಕೆ ಪಡೆದಿದೆ.
ಇಬ್ಬರೂ ಈಗಾಗಲೇ ಸಿಐಡಿ ಬಂಧನಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿದ್ದರು. ಜೈಲಿನಲ್ಲಿ ವಿಚಾರಣೆ ನಡೆಸಿದ ಬಳಿಕ, ಆರ್ಥಿಕ ವಹಿವಾಟುಗಳ ಕುರಿತು ಹೆಚ್ಚಿನ ತನಿಖೆಗಾಗಿ ಶುಕ್ರವಾರ ರಾತ್ರಿ ED ಇಬ್ಬರನ್ನೂ ಔಪಚಾರಿಕವಾಗಿ ಬಂಧಿಸಿ ಕಸ್ಟಡಿಗೆ ಪಡೆದಿದೆ ಎಂದು ವರದಿಯಾಗಿದೆ.
KPSCಯ ಪರೀಕ್ಷಾ ನಿಯಂತ್ರಕರಾಗಿದ್ದ ಅವಧಿಯಲ್ಲಿ ನಡೆದ ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ OMR ಉತ್ತರ ಪತ್ರಿಕೆಗಳ ಅಕ್ರಮ ತಿದ್ದುಪಡಿ ಸೇರಿದಂತೆ ಹಲವು ಆರೋಪಗಳ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಅಭ್ಯರ್ಥಿಗಳಿಂದ ₹12 ಕೋಟಿಗೂ ಅಧಿಕ ಹಣ ಸಂಗ್ರಹವಾಗಿರುವ ಶಂಕೆ ವ್ಯಕ್ತವಾಗಿದ್ದು, ಹಣದ ಹರಿವು ಮತ್ತು ಅದರ ಬಳಕೆಯ ಬಗ್ಗೆ ED ಪರಿಶೀಲನೆ ನಡೆಸುತ್ತಿದೆ.

ಸಿಐಡಿ ತನಿಖೆಯ ಪ್ರಕಾರ, ಮಧ್ಯವರ್ತಿ ಕನ್ನಾಳೆ ಮೂಲಕ ಅಭ್ಯರ್ಥಿಗಳಿಂದ ಹಣ ಸಂಗ್ರಹಿಸಲಾಗಿತ್ತು ಎಂಬ ಆರೋಪವಿದೆ. ಹಣದ ಒಂದು ಭಾಗವನ್ನು ಚಿನ್ನಾಭರಣ ಖರೀದಿ ಸೇರಿದಂತೆ ವಿವಿಧ ವೆಚ್ಚಗಳಿಗೆ ಬಳಸಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ KPSC ಸದಸ್ಯೆ ಶಾಂತಾ ಹೊಸಮನಿ ಅವರ ವಿಚಾರಣೆಯನ್ನೂ ಸಿಐಡಿ ಮುಂದುವರಿಸಿದೆ. ಅವರು ಸೆ.17ರಂದು ತನಿಖಾಧಿಕಾರಿಗಳ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಯಶಸ್ವಿ ಅಭ್ಯರ್ಥಿಗಳೊಂದಿಗೆ ಪರೀಕ್ಷೆಯ ಬಳಿಕ ಸಂಪರ್ಕ ಹೊಂದಿದ್ದ ಆರೋಪಗಳ ಕುರಿತು ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ನೇಮಕಾತಿ ಅಕ್ರಮದ ತನಿಖೆಯ ಭಾಗವಾಗಿ ಸಿಐಡಿ ಮತ್ತು ED ಈಗಾಗಲೇ ಹಲವು ಸ್ಥಳಗಳಲ್ಲಿ ಶೋಧ ನಡೆಸಿದ್ದು, ಹಣದ ಮೂಲ, ಮಧ್ಯವರ್ತಿಗಳ ಜಾಲ ಹಾಗೂ ಅಕ್ರಮದಿಂದ ಬಂದಿರಬಹುದಾದ ಹಣವನ್ನು ಯಾವ ರೀತಿಯಲ್ಲಿ ಬಳಸಲಾಗಿದೆ ಎಂಬುದರ ಕುರಿತು ತನಿಖೆ ಮುಂದುವರಿದಿದೆ.
