ನವೆಂಬರ್ ಚುನಾವಣೆ ಬಳಿಕ ಅಮೆರಿಕ-ಇರಾನ್ ಯುದ್ಧ ಅಂತ್ಯ: ಟ್ರಂಪ್ ಭವಿಷ್ಯ

0
Donald-Trump-300x205-3

ವಾಷಿಂಗ್ಟನ್: ಜಗತ್ತಿನಾದ್ಯಂತ ಆತಂಕಕ್ಕೆ ಕಾರಣವಾಗಿರುವ ಅಮೆರಿಕ-ಇರಾನ್ ಸಂಘರ್ಷವು ಮುಂಬರುವ ನವೆಂಬರ್ ಮಧ್ಯಾವಧಿ ಚುನಾವಣೆ ಬಳಿಕ “ತಕ್ಷಣವೇ” ಅಂತ್ಯಗೊಳ್ಳಲಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿ ನಡೆಯಲಿರುವ ರಿಪಬ್ಲಿಕನ್ ಸಮಾವೇಶಕ್ಕೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಟ್ರಂಪ್, ಇರಾನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಇರಾನ್ ಹೆಚ್ಚು ದಿನಗಳ ಕಾಲ ಯುದ್ಧವನ್ನು ಮುಂದುವರಿಸಲು ಸಾಧ್ಯವಿಲ್ಲ. ಅಮೆರಿಕದ ಮಧ್ಯಾವಧಿ ಚುನಾವಣೆಯ ಮೇಲೆ ಪ್ರಭಾವ ಬೀರುವ ಉದ್ದೇಶದಿಂದಲೇ ಟೆಹ್ರಾನ್ ಸಂಘರ್ಷವನ್ನು ಎಳೆಯುತ್ತಿದೆ ಎಂದು ಟ್ರಂಪ್ ಆರೋಪಿಸಿದರು.

‘ಚುನಾವಣೆ ಬಳಿಕ ತೈಲ ಬೆಲೆ ಕುಸಿತ’

ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 100 ಡಾಲರ್‌ ದಾಟಿದೆ. ಇದರಿಂದ ಹಲವು ದೇಶಗಳಲ್ಲಿ ಇಂಧನ ಬೆಲೆ ಏರಿಕೆಯ ಆತಂಕ ಎದುರಾಗಿದೆ.

ನವೆಂಬರ್ ಚುನಾವಣೆವರೆಗೆ ತೈಲ ಬೆಲೆಯಲ್ಲಿ ದೊಡ್ಡ ಇಳಿಕೆ ಕಂಡುಬರುವ ಸಾಧ್ಯತೆ ಕಡಿಮೆ. ಆದರೆ ಚುನಾವಣೆ ಮುಗಿದ ಬಳಿಕ ಬೆಲೆಗಳು ಭಾರಿ ಪ್ರಮಾಣದಲ್ಲಿ ಕುಸಿಯಲಿವೆ ಎಂದು ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

7ನೇ ತಿಂಗಳಿಗೆ ಕಾಲಿಟ್ಟ ಸಂಘರ್ಷ

ಕೆಲವೇ ವಾರಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಅಮೆರಿಕದ ಮಿಲಿಟರಿ ಕಾರ್ಯಾಚರಣೆ ಇದೀಗ ಏಳನೇ ತಿಂಗಳಿಗೆ ಕಾಲಿಟ್ಟಿದೆ.

ಅಮೆರಿಕ ಸೇನೆ ಯೋಜನೆಗಿಂತ ಮುಂದಿದ್ದು, ಇರಾನ್‌ನ ಬಹುತೇಕ ಪ್ರಮುಖ ನೆಲೆಗಳನ್ನು ಧ್ವಂಸಗೊಳಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.

ಆದರೆ, ಸಂಘರ್ಷ ಸುದೀರ್ಘವಾಗುವ ಸಾಧ್ಯತೆ ಬಗ್ಗೆ ಶ್ವೇತಭವನದಲ್ಲೇ ಆತಂಕ ವ್ಯಕ್ತವಾಗಿದೆ ಎನ್ನಲಾಗಿದೆ. ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯ ಅಂತ್ಯದವರೆಗೂ ಯುದ್ಧ ಮುಂದುವರಿಯಬಹುದೆಂಬ ಕಳವಳವನ್ನು ಹಿರಿಯ ಸಲಹೆಗಾರರು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.

ಟ್ರಂಪ್‌ರ ಹೇಳಿಕೆಗಳ ನಡುವೆ ಅಮೆರಿಕ-ಇರಾನ್ ಸಂಘರ್ಷದ ಮುಂದಿನ ಬೆಳವಣಿಗೆ ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲಿನ ಪರಿಣಾಮದ ಬಗ್ಗೆ ಕುತೂಹಲ ಹೆಚ್ಚಿದೆ.

Leave a Reply

Your email address will not be published. Required fields are marked *