ನಕಲಿ ಮದ್ಯ ಸೇವಿಸಿ 12 ಮಂದಿ ಸಾವು; ಸಾಗರ್‌ನಲ್ಲಿ 6 ಮದ್ಯದಂಗಡಿಗಳಿಗೆ ಬೀಗ

0
Crime-Police-750x415-1-300x166-1

ಭೋಪಾಲ್: ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಕನಿಷ್ಠ 12 ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಾಗರ್‌ನಿಂದ ಸುಮಾರು 30 ಕಿ.ಮೀ ದೂರದಲ್ಲಿರುವ ಬಂದಾ ತೆಹಸಿಲ್‌ನ ಬರಾಜ್, ಘೂಘರ್, ನಾವ್‌ರಾಜ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಈ ದುರಂತ ಸಂಭವಿಸಿದೆ. ಮದ್ಯ ಸೇವಿಸಿದ್ದ ಗ್ರಾಮಸ್ಥರಿಗೆ ಭಾನುವಾರ ಮುಂಜಾನೆ ತೀವ್ರ ತಲೆನೋವು, ವಾಂತಿ ಹಾಗೂ ಕಣ್ಣು ಮಂಜಾಗುವಿಕೆ ಕಾಣಿಸಿಕೊಂಡಿದೆ.

ಅಸ್ವಸ್ಥರನ್ನು ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ 12 ಮಂದಿ ಮೃತಪಟ್ಟಿದ್ದಾರೆ.

ಮಿಥೈಲ್ ಆಲ್ಕೋಹಾಲ್ ಮಿಶ್ರಣ ಶಂಕೆ

ಚಿಕಿತ್ಸೆ ಪಡೆಯುತ್ತಿರುವವರಲ್ಲಿ ದೇಹ ಹಾಗೂ ಚರ್ಮ ನೀಲಿ ಬಣ್ಣಕ್ಕೆ ತಿರುಗುವ ಸೈನೋಸಿಸ್ ಮತ್ತು ಸ್ನಾಯು ಬಿಗಿತದ ಲಕ್ಷಣಗಳು ಕಂಡುಬಂದಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಮದ್ಯದಲ್ಲಿ ವಿಷಕಾರಿ ಮಿಥೈಲ್ ಆಲ್ಕೋಹಾಲ್ ಬೆರೆಸಿರುವ ಸಾಧ್ಯತೆ ಇದೆ ಎಂದು ಮುಖ್ಯ ವೈದ್ಯಕೀಯ ಅಧಿಕಾರಿ ಶಂಕೆ ವ್ಯಕ್ತಪಡಿಸಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿಯಲು ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿವೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಮೋಹನ್ ಯಾದವ್ ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ಆರು ಮದ್ಯದಂಗಡಿಗಳನ್ನು ಸೀಲ್ ಮಾಡಲಾಗಿದೆ.

ಲಲಿತಪುರ ಗಡಿಯಿಂದ ನಕಲಿ ಮದ್ಯ ಪೂರೈಕೆ?

ಪ್ರಾಥಮಿಕ ತನಿಖೆಯಲ್ಲಿ ಉತ್ತರ ಪ್ರದೇಶದ ಲಲಿತಪುರ ಗಡಿ ಪ್ರದೇಶದಿಂದ ನಕಲಿ ಮದ್ಯದ ಜಾಲ ಕಾರ್ಯನಿರ್ವಹಿಸುತ್ತಿರುವ ಶಂಕೆ ವ್ಯಕ್ತವಾಗಿದೆ.

ನಕಲಿ ಮದ್ಯವನ್ನು ಅಸಲಿ ಬ್ರ್ಯಾಂಡ್‌ಗಳಂತೆ ತೋರಿಸಲು ನಕಲಿ ಲೇಬಲ್‌, ಕ್ಯಾಪ್‌ ಹಾಗೂ ಕ್ಯೂಆರ್ ಕೋಡ್‌ಗಳನ್ನು ಬಳಸಿ ಬಾಟಲಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎನ್ನಲಾಗಿದೆ. ಬಳಿಕ ಕಾರು ಮತ್ತು ಬೈಕ್‌ಗಳ ಮೂಲಕ ಸಾಗರ್ ಜಿಲ್ಲೆಯ ಗಡಿ ಗ್ರಾಮಗಳಿಗೆ ಪೂರೈಸಲಾಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.ಈ ದಂಧೆಯಲ್ಲಿ ಸ್ಥಳೀಯರ ಕೈವಾಡವಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *