ಸೋನಿಯಾ ಗಾಂಧಿ ಆತ್ಮಕಥೆ ಪ್ರಕಟಣೆಯಿಂದ ಹಿಂದೆ ಸರಿದ ಪೆಂಗ್ವಿನ್ ಇಂಡಿಯಾ

ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಬಹುನಿರೀಕ್ಷಿತ ಆತ್ಮಕಥೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್ ಪ್ರಕಟಣೆಯಿಂದ ಪೆಂಗ್ವಿನ್ ಇಂಡಿಯಾ ಹಿಂದೆ ಸರಿದಿದೆ.
ನವೆಂಬರ್ 10ರಂದು ಪುಸ್ತಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಬೇಕಿತ್ತು. ಪೆಂಗ್ವಿನ್ ರಾಂಡಮ್ ಹೌಸ್‌ನ ಭಾಗವಾಗಿರುವ ಆಲ್‌ಫ್ರೆಡ್ ಎ. ನಾಫ್ ಸಂಸ್ಥೆ ಪುಸ್ತಕವನ್ನು ಪ್ರಕಟಿಸಲು ಸಿದ್ಧತೆ ನಡೆಸಿತ್ತು. ಆರಂಭಿಕವಾಗಿ ಒಂದು ಲಕ್ಷ ಪ್ರತಿಗಳನ್ನು ಮುದ್ರಿಸಲು ಯೋಜಿಸಲಾಗಿತ್ತು.

ಈ ಕುರಿತು ಹೇಳಿಕೆ ನೀಡಿರುವ ಪೆಂಗ್ವಿನ್ ಇಂಡಿಯಾ, ಲೇಖಕರ ಹಾಗೂ ಪುಸ್ತಕದ ಹಿತಾಸಕ್ತಿಗೆ ಅನುಗುಣವಾಗಿ ಕೃತಿಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು ಪ್ರಕಾಶಕರ ಹಕ್ಕು ಮತ್ತು ಜವಾಬ್ದಾರಿ. ಆದರೆ, ಲೇಖಕರೊಂದಿಗೆ ನಡೆದ ಗೌಪ್ಯ ಚರ್ಚೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದೆ.
ಸೋನಿಯಾ ಗಾಂಧಿ ಅವರ ಬಾಲ್ಯ, ಎರಡನೇ ಮಹಾಯುದ್ಧದ ನಂತರದ ಇಟಲಿಯಲ್ಲಿನ ಜೀವನ, ಭಾರತಕ್ಕೆ ಆಗಮನ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರೊಂದಿಗಿನ ವಿವಾಹದ ಅನುಭವಗಳು ಆತ್ಮಕಥೆಯಲ್ಲಿ ಇರಲಿವೆ ಎಂದು ನಿರೀಕ್ಷಿಸಲಾಗಿತ್ತು.
ಇದರೊಂದಿಗೆ ಸಂಜಯ್ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ನಿಧನ ಸೇರಿದಂತೆ ಕುಟುಂಬದಲ್ಲಿ ನಡೆದ ಪ್ರಮುಖ ದುರಂತಗಳ ಬಗ್ಗೆಯೂ ಪುಸ್ತಕದಲ್ಲಿ ವಿವರಗಳಿರಲಿವೆ ಎನ್ನಲಾಗಿತ್ತು.
ಸೋನಿಯಾ ಗಾಂಧಿ ಅವರ ಸಾರ್ವಜನಿಕ ಜೀವನಕ್ಕೆ ಪ್ರವೇಶ, ನೆಹರೂ-ಗಾಂಧಿ ಕುಟುಂಬದೊಂದಿಗಿನ ದೀರ್ಘಕಾಲದ ಅನುಭವಗಳು ಹಾಗೂ ಭಾರತದ ಪ್ರಮುಖ ರಾಜಕೀಯ ಕುಟುಂಬವೊಂದರ ಕೇಂದ್ರಬಿಂದುವಾಗಿ ಕಳೆದ ವರ್ಷಗಳ ಕುರಿತ ನೆನಪುಗಳೂ ಆತ್ಮಕಥೆಯ ಪ್ರಮುಖ ಅಂಶಗಳಾಗಿವೆ.
