ಮಳೆ ಕೊರತೆ ನೀಗಿಸಲು ಮೋಡ ಬಿತ್ತನೆಗೆ ಸರ್ಕಾರದ ನಿರ್ಧಾರ

0
Chaluvarayaswamy-Cheluvarayaswamy

ಬೆಂಗಳೂರು: ರಾಜ್ಯದ ವಿವಿಧ ಜಲಾನಯನ ಪ್ರದೇಶಗಳಲ್ಲಿ ಮಳೆ ಕೊರತೆ ಹಾಗೂ ಜಲಾಶಯಗಳ ಒಳಹರಿವು ಕುಸಿದಿರುವ ಹಿನ್ನೆಲೆಯಲ್ಲಿ ಮೋಡ ಬಿತ್ತನೆ (Cloud Seeding) ಕೈಗೊಳ್ಳುವ ಕುರಿತು ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ.

ಈ ಸಂಬಂಧ ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ನೇತೃತ್ವದಲ್ಲಿ ಸೋಮವಾರ ವಿಧಾನಸೌಧದಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಿ ಮುಂಗಾರು ಮಾರುತಗಳ ಸ್ಥಿತಿ ಮತ್ತು ಪ್ರಮುಖ ಜಲಾಶಯಗಳಲ್ಲಿನ ನೀರಿನ ಸಂಗ್ರಹದ ಕುರಿತು ಚರ್ಚಿಸಿದರು.

ಕೃಷ್ಣಾ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳೊಂದಿಗೆ ಸಚಿವರು ಪ್ರತ್ಯೇಕವಾಗಿ ಸಮಾಲೋಚನೆ ನಡೆಸಿದರು. ಆಯಾ ನಿಗಮಗಳ ವ್ಯಾಪ್ತಿಯ ಅಣೆಕಟ್ಟುಗಳ ನೀರಿನ ಲಭ್ಯತೆ, ಒಳಹರಿವಿನ ಪ್ರಮಾಣ ಹಾಗೂ ಕಾಲುವೆಗಳಿಗೆ ನೀರು ಹರಿಸುವ ಸಿದ್ಧತೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ರೈತರ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಮಳೆ ಕೊರತೆ ನೀಗಿಸುವ ಉದ್ದೇಶದಿಂದ ಮೋಡ ಬಿತ್ತನೆ ಸಾಧ್ಯತೆ ಕುರಿತು ಅಧಿಕೃತ ಅಧ್ಯಯನವೂ ಆರಂಭವಾಗಿದೆ. ಅಧ್ಯಯನದ ವರದಿ ಹಾಗೂ ಅದರ ಸಾಧಕ-ಬಾಧಕಗಳನ್ನು ಪರಿಶೀಲಿಸಲು ಮಂಗಳವಾರ ಮತ್ತೊಂದು ಉನ್ನತ ಮಟ್ಟದ ಸಭೆ ನಡೆಯಲಿದೆ.

ಸಭೆಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ (KSNDMC) ತಜ್ಞರು, ಪ್ರಮುಖ ಕಾರ್ಯದರ್ಶಿಗಳು ಹಾಗೂ ಅಪರ ಮುಖ್ಯ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ. ಮೋಡ ಬಿತ್ತನೆ ಕಾರ್ಯಾಚರಣೆಯನ್ನು ಕೈಗೊಳ್ಳಲು ಸಮರ್ಥ ಏಜೆನ್ಸಿಯನ್ನು ಅಂತಿಮಗೊಳಿಸುವ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಇದೇ ವೇಳೆ ಕಾವೇರಿ ನೀರು ಬಿಡುಗಡೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ನಲ್ಲಿನ ವಿಚಾರಣೆ ಮುಂದಿನ ಸೋಮವಾರಕ್ಕೆ ಮುಂದೂಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಹಿತಾಸಕ್ತಿ ಹಾಗೂ ಕುಡಿಯುವ ನೀರಿನ ಅಗತ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಹವಾಮಾನ ಪರಿಸ್ಥಿತಿ ಹಾಗೂ ಜಲಾಶಯಗಳ ನೀರಿನ ಲಭ್ಯತೆಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದೂ ಅವರು ಹೇಳಿದರು.

Leave a Reply

Your email address will not be published. Required fields are marked *