ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಸಾಫ್ಟ್‌ವೇರ್ ಮೇಲ್ದರ್ಜೆ: ಪರಮೇಶ್ವರ್

ಬೆಂಗಳೂರು: ರಾಜ್ಯದಲ್ಲಿ ಬಾಕಿ ಉಳಿದಿರುವ ಬಗರ್ ಹುಕುಂ (ಅಕ್ರಮ-ಸಕ್ರಮ) ಭೂಮಿ ಮಂಜೂರಾತಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸರ್ಕಾರಿ ಸಾಫ್ಟ್‌ವೇರ್‌ನ್ನು ಮೇಲ್ದರ್ಜೆಗೇರಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಸೆಕ್ಷನ್ 94ರಡಿ ಸರ್ಕಾರಿ ಭೂಮಿಯಲ್ಲಿ ಅನಧಿಕೃತ ಸಾಗುವಳಿಯನ್ನು ಸಕ್ರಮಗೊಳಿಸಲು ಅವಕಾಶವಿದೆ ಎಂದರು.

2023ರ ಸೆಪ್ಟೆಂಬರ್ 26ರಿಂದ 2024ರ ಜನವರಿ 21ರವರೆಗೆ ಫಾರ್ಮ್ 50-53 ಮೂಲಕ ಅರ್ಜಿಗಳನ್ನು ಸರ್ಕಾರದ ವೆಬ್‌ಸೈಟ್‌ನಲ್ಲಿ ಸ್ವೀಕರಿಸಲಾಗಿತ್ತು. ಈ ಅರ್ಜಿಗಳ ಪೈಕಿ ಹಲವು ವಿವಿಧ ಹಂತಗಳಲ್ಲಿ ಬಾಕಿ ಉಳಿದಿವೆ ಎಂದು ಹೇಳಿದರು.
ಈಗಾಗಲೇ ಭೂಮಿ ಮಂಜೂರಾಗಿ ಸಾಗುವಳಿ ಪ್ರಮಾಣಪತ್ರ ನೀಡಿದ್ದರೂ, ಕಂದಾಯ ದಾಖಲೆಗಳಲ್ಲಿ ನೋಂದಣಿ ಆಗದ ಪ್ರಕರಣಗಳನ್ನು ಸಂಬಂಧಪಟ್ಟ ಸಾಫ್ಟ್‌ವೇರ್‌ನಲ್ಲಿ ದಾಖಲಿಸಿ ಮುಂದಿನ ಪ್ರಕ್ರಿಯೆ ನಡೆಸಲಾಗುವುದು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (PDO) ಮೊದಲು ಪ್ರೊಫಾರ್ಮಾ 1-5 ಸಾಫ್ಟ್‌ವೇರ್‌ನಲ್ಲಿ ವಿವರ ದಾಖಲಿಸಬೇಕು. ಬಳಿಕ ಪ್ರಕರಣಗಳನ್ನು ಪ್ರೊಫಾರ್ಮಾ-1 ಹಾಗೂ ಬಗರ್ ಹುಕುಂ ಸಾಫ್ಟ್‌ವೇರ್‌ಗೆ ವರ್ಗಾಯಿಸಿ ಕಂದಾಯ ದಾಖಲೆಗಳಲ್ಲಿ ಅಂತಿಮವಾಗಿ ನಮೂದಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು.
ಬಗರ್ ಹುಕುಂ ಅಡಿ ಭೂಮಿ ಮಂಜೂರಾಗಿದ್ದರೂ ಕಂದಾಯ ಖಾತೆ ಹಾಗೂ ಸಾಗುವಳಿ ಪ್ರಮಾಣಪತ್ರ ಬಾಕಿ ಇರುವ ಪ್ರಕರಣಗಳನ್ನು ಇನ್ನೂ ಸಾಫ್ಟ್‌ವೇರ್‌ನಲ್ಲಿ ದಾಖಲಿಸಲಾಗಿಲ್ಲ. ಸಾಫ್ಟ್‌ವೇರ್ ಮೇಲ್ದರ್ಜೆಯಿಂದ ಇಂತಹ ದೀರ್ಘಕಾಲದ ಬಾಕಿ ಪ್ರಕರಣಗಳ ವಿಲೇವಾರಿ ವೇಗಗೊಳ್ಳಲಿದೆ ಎಂದು ಅವರು ಹೇಳಿದರು.
