ಮಲೆ ಮಹದೇಶ್ವರ ಬೆಟ್ಟ ಹುಂಡಿಯಲ್ಲಿ ₹3.37 ಕೋಟಿ ಕಾಣಿಕೆ; 41 ದಿನಗಳಲ್ಲಿ 58 ಗ್ರಾಂ ಚಿನ್ನ, 1.25 ಕೆಜಿ ಬೆಳ್ಳಿ ಅರ್ಪಣೆ

0
MM-Hills-temple-hundi-collections-counting-300x180-1

ಹನೂರು: ಪುರಾಣ ಪ್ರಸಿದ್ಧ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ ದೇವಸ್ಥಾನದ ಹುಂಡಿ ಹಣ ಎಣಿಕೆ ಬುಧವಾರ ಪೂರ್ಣಗೊಂಡಿದ್ದು, ಕಳೆದ 41 ದಿನಗಳ ಅವಧಿಯಲ್ಲಿ ₹3,37,06,956 ನಗದು ಕಾಣಿಕೆ ಸಂಗ್ರಹವಾಗಿದೆ. ಜೊತೆಗೆ 58 ಗ್ರಾಂ ಚಿನ್ನ ಹಾಗೂ 1 ಕೆಜಿ 250 ಗ್ರಾಂ ಬೆಳ್ಳಿ ವಸ್ತುಗಳನ್ನು ಭಕ್ತರು ಹುಂಡಿಗೆ ಸಮರ್ಪಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯಿರುವ ವಾಣಿಜ್ಯ ಸಂಕೀರ್ಣದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಜಿ. ಪುರುಷೋತ್ತಮ್ ಹಾಗೂ ಸಾಲೂರು ಬೃಹನ್ ಮಠದ ಅಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಮಂಗಳವಾರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮೆರಾ ನಿಗಾದಲ್ಲಿ ಹಣ ಎಣಿಕೆ ಕಾರ್ಯ ಆರಂಭಗೊಂಡು ಬುಧವಾರ ಸಂಜೆ ಪೂರ್ಣಗೊಂಡಿತು.

ಸರ್ಕಾರಿ ರಜೆಗಳು, ಅಮಾವಾಸ್ಯೆ ವಿಶೇಷ ಪೂಜೆ, ಜಾತ್ರಾ ಮಹೋತ್ಸವ ಹಾಗೂ ರಾಜ್ಯ ಸರ್ಕಾರದ ಶಕ್ತಿ ಯೋಜನೆ ಜಾರಿಯಾದ ಬಳಿಕ ಮಹಿಳಾ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಾಣಿಕೆ ಸಂಗ್ರಹ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಈ ಅವಧಿಯಲ್ಲಿ ಸಾವಿರಾರು ಭಕ್ತರು ಶ್ರೀ ಮಲೆ ಮಹದೇಶ್ವರನ ದರ್ಶನ ಪಡೆದು ಹರಕೆ ಸಲ್ಲಿಸಿದ್ದಾರೆ.

ಹುಂಡಿ ಎಣಿಕೆ ವೇಳೆ ₹2,000 ಮುಖಬೆಲೆಯ ಚಲಾವಣೆಯಿಂದ ಹಿಂಪಡೆಯಲಾದ ನಾಲ್ಕು ನೋಟುಗಳು ಹಾಗೂ 10 ವಿದೇಶಿ ಕರೆನ್ಸಿ ನೋಟುಗಳು ಸಹ ಪತ್ತೆಯಾಗಿವೆ.

ಹುಂಡಿ ಎಣಿಕೆ ಕಾರ್ಯದಲ್ಲಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಮಹಾದೇವಪ್ಪ ಕೀಳನಪುರ, ಭಾಗ್ಯಮ್ಮ ಕುಪ್ಯಾ, ಮರಿಸ್ವಾಮಿ ಕಾಗಲವಾಡಿ, ಗಂಗನ ತಿಮ್ಮಯ್ಯ ಮೆಲ್ಲಹಳ್ಳಿ, ಕುಮಾರ ವಿಜಯ ರಾವಂದೂರು, ಹಣಕಾಸು ಸಲಹೆಗಾರ ಮಹದೇವ ಸಿ., ಉಪ ಕಾರ್ಯದರ್ಶಿ ಜಿ.ಎಲ್. ಚಂದ್ರಶೇಖರ್, ಚಾಮರಾಜನಗರ ಜಿಲ್ಲಾಧಿಕಾರಿ ಕಚೇರಿಯ ವಿಷಯ ನಿರ್ವಾಹಕಿ ಆರ್. ಭಾರತಿ, ಬ್ಯಾಂಕ್ ಆಫ್ ಬರೋಡಾ ಕೊಳ್ಳೇಗಾಲ ಶಾಖೆಯ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ, ಪೊಲೀಸ್ ಇಲಾಖೆ ಮತ್ತು ಪ್ರಾಧಿಕಾರದ ವಿವಿಧ ವಿಭಾಗಗಳ ಸಿಬ್ಬಂದಿ ಉಪಸ್ಥಿತರಿದ್ದು, ಪಾರದರ್ಶಕವಾಗಿ ಎಣಿಕೆ ಕಾರ್ಯ ನಡೆಸಿದರು.

Leave a Reply

Your email address will not be published. Required fields are marked *

You may have missed