ರಾಹುಲ್ ಗಾಂಧಿ ಬಂಧನವು ‘ಪ್ರಜಾಪ್ರಭುತ್ವದ ಮೇಲಿನ ದಾಳಿ’; ಎಂದ ಪದ್ಮರಾಜ್ ಪೂಜಾರಿ

0
Padmaraj-R-Pujari-meet-Rahul-gandhi-300x192-1

ಮಂಗಳೂರು: ದೆಹಲಿಯಲ್ಲಿ ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ಪ್ರಧಾನಿ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವ ಕ್ರಮವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ನಾಯಕ ಪದ್ಮರಾಜ್ ಆರ್. ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ.

ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ವಿದ್ಯಾರ್ಥಿಗಳ ನ್ಯಾಯಸಮ್ಮತ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ವ್ಯವಸ್ಥೆಯ ವೈಫಲ್ಯದಿಂದ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯ ಸಂಕಷ್ಟಕ್ಕೆ ಸಿಲುಕಿದ್ದು, ಇತ್ತೀಚಿನ ನೀಟ್ ಹಗರಣದ ಬಳಿಕ ಹಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ದೇಶಕ್ಕೆ ತಲೆತಗ್ಗಿಸುವ ಸಂಗತಿ ಎಂದು ಹೇಳಿದ್ದಾರೆ. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಯುವಜನರ ಭವಿಷ್ಯವನ್ನು ಉಳಿಸಲು ನಾವು ಎಂದೆಂದಿಗೂ ರಾಹುಲ್ ಗಾಂಧಿಯವರೊಂದಿಗೆ ದೃಢವಾಗಿ, ಅಚಲವಾಗಿ ನಿಲ್ಲುತ್ತೇವೆ ಎಂದಿದ್ದಾರೆ.

ಬಡತನ ಮತ್ತು ಸಂಕಷ್ಟದ ನಡುವೆಯೂ ಶಿಕ್ಷಣಕ್ಕಾಗಿ ಶ್ರಮಿಸಿದ ವಿದ್ಯಾರ್ಥಿಗಳ ಜೀವಹಾನಿಗೆ ಸರ್ಕಾರವೇ ಹೊಣೆ ಎಂದು ಆರೋಪಿಸಿರುವ ಪದ್ಮರಾಜ್, ಮೃತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ತಲಾ ₹1 ಕೋಟಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ಹಾಗೂ ಅಶ್ರುವಾಯು ಪ್ರಯೋಗ ನಡೆಸಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.

ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುತ್ತಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರನ್ನು ಬಂಧಿಸಿರುವುದು ಪ್ರಶ್ನಿಸುವ ಧ್ವನಿಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದ್ದು, ಇದು ಭಾರತೀಯ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ ಎಂದು ಟೀಕಿಸಿದ್ದಾರೆ.

ಪರೀಕ್ಷಾ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾಗಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಇಲ್ಲವಾದರೆ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರ್ಕಾರ ಹಠಮಾರಿ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ಕೈಬಿಟ್ಟು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸಬೇಕು. ದೇಶದ ಸಂವಿಧಾನ, ಪ್ರಜಾಪ್ರಭುತ್ವ ಹಾಗೂ ಯುವಜನರ ಭವಿಷ್ಯವನ್ನು ರಕ್ಷಿಸುವ ಹೋರಾಟದಲ್ಲಿ ಕಾಂಗ್ರೆಸ್ ರಾಹುಲ್ ಗಾಂಧಿ ಅವರೊಂದಿಗೆ ದೃಢವಾಗಿ ನಿಲ್ಲಲಿದೆ ಎಂದು ಪದ್ಮರಾಜ್ ಪೂಜಾರಿ ಹೇಳಿದ್ದಾರೆ.

Leave a Reply

Your email address will not be published. Required fields are marked *