ಎಂ.ಕೆ. ಪ್ರಾಣೇಶ್ ಆಯ್ಕೆ ಅಮಾನ್ಯ, ಗಾಯತ್ರಿ ಶಾಂತೇಗೌಡಗೆ ಒಲಿದ MLC ಸ್ಥಾನ; ಸುಪ್ರೀಂ ತೀರ್ಪಿಗೆ ಬಿಕೆಹೆಚ್ ಹರ್ಷ

0
supreme-Court-india-300x169-1

ಬೆಂಗಳೂರು: ವಿಧಾನಪರಿಷತ್ತಿನ ಸದಸ್ಯತ್ವ ಸ್ಥಾನದಿಂದ ಎಂ.ಕೆ. ಪ್ರಾಣೇಶ್ ಅವರನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್ ತೀರ್ಪು ಪ್ರಜಾಪ್ರಭುತ್ವದ ಮೌಲ್ಯಗಳು, ಜನಾದೇಶ ಹಾಗೂ ಸತ್ಯದ ಗೆಲುವು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಜನರು ನೀಡಿದ ಸ್ಪಷ್ಟ ಜನಾದೇಶವನ್ನು ಕಾನೂನು ಪ್ರಕ್ರಿಯೆಯ ದುರ್ಬಳಕೆಯ ಮೂಲಕ ವಿಕೃತಗೊಳಿಸುವ ಎಲ್ಲ ಪ್ರಯತ್ನಗಳಿಗೆ ಸುಪ್ರೀಂ ಕೋರ್ಟ್ ತೀರ್ಪು ಸ್ಪಷ್ಟ ಉತ್ತರ ನೀಡಿದೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪೇ ಸರ್ವೋಚ್ಚವಾಗಿದ್ದು, ಅದನ್ನು ರಾಜಕೀಯ ಕುತಂತ್ರಗಳ ಮೂಲಕ ಅಥವಾ ನ್ಯಾಯಾಂಗವನ್ನು ರಾಜಕೀಯ ಹೋರಾಟದ ವೇದಿಕೆಯಾಗಿ ಬಳಸುವ ಮೂಲಕ ಬದಲಾಯಿಸಲು ಸಾಧ್ಯವಿಲ್ಲ. ಸಂವಿಧಾನ ಮತ್ತು ನ್ಯಾಯಾಂಗ ಮತ್ತೊಮ್ಮೆ ಜನರ ವಿಶ್ವಾಸವನ್ನು ಎತ್ತಿಹಿಡಿದಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ತೀರ್ಪು ಪ್ರಜಾಪ್ರಭುತ್ವದ ಮೌಲ್ಯಗಳ ಗೆಲುವು, ಜನಾದೇಶದ ಗೆಲುವು ಹಾಗೂ ಸತ್ಯದ ಗೆಲುವಾಗಿದೆ ಎಂದು ಬಣ್ಣಿಸಿರುವ ಹರಿಪ್ರಸಾದ್, ಈ ನ್ಯಾಯಸಮ್ಮತ ಹೋರಾಟದಲ್ಲಿ ದೃಢವಾಗಿ ನಿಂತು ಜನರ ವಿಶ್ವಾಸವನ್ನು ಉಳಿಸಿಕೊಂಡಿರುವ ವಿಧಾನಪರಿಷತ್ ಸದಸ್ಯೆಯಾಗಿ ಆಯ್ಕೆಯಾದ ಗಾಯತ್ರಿ ಶಾಂತೇಗೌಡ ಅವರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದ್ದಾರೆ.

ಜನಸೇವೆಯ ಅವರ ಪಯಣ ಇನ್ನಷ್ಟು ಅರ್ಥಪೂರ್ಣವಾಗಲಿ ಎಂದು ಹಾರೈಸಿರುವ ಹರಿಪ್ರಸಾದ್, ಸುಪ್ರೀಂ ಕೋರ್ಟ್ ತೀರ್ಪು ಪ್ರಜಾಪ್ರಭುತ್ವದ ಮೇಲಿನ ಜನರ ನಂಬಿಕೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

You may have missed