‘ಶಾಶ್ವತ ನಿವಾಸ ಪ್ರಮಾಣಪತ್ರ’ ಪ್ರಸ್ತಾವನೆ ಕಾನೂನುಬಾಹಿರ; ಒಕ್ಕೂಟ ವ್ಯವಸ್ಥೆಗೂ ಅಪಾಯಕಾರಿ

0
vidhanasoudha-300x194-1

ಬೆಂಗಳೂರು: ರಾಜ್ಯ ಸರ್ಕಾರವು ‘ಶಾಶ್ವತ ನಿವಾಸ ಪ್ರಮಾಣಪತ್ರ’ (PRC) ನೀಡುವ ಅಧಿಕಾರವನ್ನು ಸ್ವತಃ ಪಡೆದುಕೊಳ್ಳಲು ಮುಂದಾಗಿರುವುದು ಕಾನೂನುಬಾಹಿರ ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಗೂ ಧಕ್ಕೆ ತರುವ ಅಪಾಯಕಾರಿ ನಡೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದ್ದಾರೆ.

ಬಿಜೆಪಿ ನಿಯೋಗದೊಂದಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಬುಧವಾರ ಭೇಟಿ ಮಾಡಿ ಮನವಿ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಸರ್ಕಾರ ಈ ಸಂಬಂಧ ಅಧಿಸೂಚನೆ ಸಿದ್ಧಪಡಿಸಿದರೆ ಅದಕ್ಕೆ ಅಂಕಿತ ಹಾಕದಂತೆ ರಾಜ್ಯಪಾಲರನ್ನು ಕೋರಿದ್ದೇವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅಶೋಕ್, ಪೌರತ್ವ, ವಿದೇಶಿಯರ ಗುರುತಿಸುವಿಕೆ ಹಾಗೂ ವಲಸೆ ಸಂಬಂಧಿತ ವಿಷಯಗಳು ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿವೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಮುಂದಾಗಿರುವುದು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿದರು.

ದೇಶಾದ್ಯಂತ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ನಡೆಯುತ್ತಿರುವ ಸಂದರ್ಭದಲ್ಲಿ ಇಂತಹ ನಿಯಮ ಜಾರಿಗೊಳಿಸುವುದು ರಾಷ್ಟ್ರೀಯ ಭದ್ರತೆಗೂ ಅಪಾಯಕಾರಿಯಾಗಿದೆ. ಅಕ್ರಮ ವಲಸಿಗರು ನಕಲಿ ದಾಖಲೆಗಳ ಮೂಲಕ ಪ್ರಮಾಣಪತ್ರ ಪಡೆದು ಮತದಾನದ ಹಕ್ಕು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಕಂದಾಯ ಇಲಾಖೆಗೆ ಈ ಪ್ರಮಾಣಪತ್ರ ವಿತರಣೆಯ ಅಧಿಕಾರ ನೀಡಿರುವುದು ಭ್ರಷ್ಟಾಚಾರ ಮತ್ತು ನಕಲಿ ದಾಖಲೆಗಳ ಸೃಷ್ಟಿಗೆ ಅವಕಾಶ ಕಲ್ಪಿಸಲಿದೆ. ಇದರಿಂದ ಸ್ಥಳೀಯ ಕನ್ನಡಿಗರ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳ ಮೇಲೂ ದುಷ್ಪರಿಣಾಮ ಉಂಟಾಗಬಹುದು ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಅಧಿಸೂಚನೆ ಹೊರಡಿಸುವ ಮೊದಲು ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಲಾಗಿದೆಯೇ ಹಾಗೂ ಭಾರತೀಯ ಪೌರತ್ವ ಪರಿಶೀಲನೆಗೆ ಯಾವ ಕಾನೂನುಬದ್ಧ ಕ್ರಮ ಅನುಸರಿಸಲಾಗಿದೆ ಎಂಬ ಕುರಿತು ಸಮಗ್ರ ವರದಿ ಪಡೆದು, ವಿವಾದಾತ್ಮಕ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ರಾಜ್ಯಪಾಲರನ್ನು ಮನವಿ ಮಾಡಿರುವುದಾಗಿ ಅಶೋಕ್ ತಿಳಿಸಿದ್ದಾರೆ.

ಜೊತೆಗೆ, ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ಬಳಿಕ ನ್ಯಾಯಾಲಯಗಳು ಹಾಗೂ ಲೋಕ ಅದಾಲತ್‌ಗಳ ಮೂಲಕ ವಿತರಿಸಲಾದ ಜನನ ಪ್ರಮಾಣಪತ್ರಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆಯೂ ಬಿಜೆಪಿ ಮನವಿ ಮಾಡಿದೆ.

Leave a Reply

Your email address will not be published. Required fields are marked *