ಹತ್ತಾರು ಬಡ ಕುಟುಂಬಗಳಿಗೆ ಮನೆ ಭಾಗ್ಯ.. ಇದೀಗ ಸರ್ಕಾರಿ ಶಾಲೆಗೆ ಡಿಜಿಟಲ್ ಸ್ಪರ್ಶ.. ಬಿಜೂರು ಶಾಲೆಗೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಕೊಡುಗೆ ನೀಡಿದ ಗೋವಿಂದ ಬಾಬು ಪೂಜಾರಿ

0
Govinda-Babu-Pujari-300x169-1

ಉಡುಪಿ: ಬರಡು ಭೂಮಿಗೆ ಕುಡಿಯುವ ನೀರು ಹರಿಸಿ ಆಧುನಿಕ ಭಗೀರಥ ಎಂದು ಕರೆಸಿಕೊಂಡಿರುವ ಉದ್ಯಮಿ, ಹೆಸರಾಂತ ಸಮಾಜ ಸೇವಕ ಡಾ.ಗೋವಿಂದ ಬಾಬು ಪೂಜಾರಿ, ಕರ್ನಾಟಕದ ಹಲವೆಡೆ 50ಕ್ಕೂ ಹೆಚ್ಚು ಕುಟುಂಬಗಳಿಗೆ ಮನೆಗಳನ್ನು ಉಚಿತವಾಗಿ ನಿರ್ಮಿಸಿ ಕೊಟ್ಟು ಆಧುನಿಕ ಕರ್ಣ ಎನಿಸಿಕೊಂಡಿದ್ದಾರೆ. ಇದೀಗ ಕರಾವಳಿಯ ಉಡುಪಿ ಸಮೀಪದ ಬಿಜೂರಿನ ಸರ್ಕಾರಿ ಶಾಲೆಯನ್ನು ಐಟಿ ಕಂಪನಿಗೂ ಸಾಟಿಯಿಲ್ಲದ ರೀತಿ ಡಿಜಿಟಲ್ ವ್ಯವಸ್ಥೆಯೊಂದಿಗೆ ಅಭಿವೃದ್ಧಿಪಡಿಸಿ ದೇಶದ ಗಮನಸೆಳೆದಿದ್ದಾರೆ.

ಖಾಸಗಿ ಶಾಲೆಗಳ ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿ ಸಿಗಲ್ಲ ಎಂಬ ಅಭಿಪ್ರಾಯ ಹಲವರದ್ದು. ಆದರೆ, ದುಬಾರಿ ಶುಲ್ಕ ನೀಡಿ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಸಾಮರ್ಥ್ಯ ಬಹುತೇಕ ಜನರಿಗೆ ಇಲ್ಲ. ಇಂತಹ ಸಂದರ್ಭದಲ್ಲಿ ತನ್ನೂರಿನ ಮಕ್ಕಳಿಗಾಗಿ ಬೈಂದೂರು ಸಮೀಪದ ಬಿಜೂರಿನ ಸರ್ಕಾರಿ ಶಾಲೆಯನ್ನೇ ದತ್ತು ಪಡೆದಿರುವ ChefTalk ಕಂಪನಿಯ ಮಾಲೀಕ ಡಾ.ಗೋವಿಂದ ಬಾಬು ಪೂಜಾರಿ ಎಲ್ಲರಿಗೂ, ಆ ಶಾಲೆಯನ್ನು ಯಾವ ಕಾರ್ಪೊರೇಟ್ ಶಾಲೆಗೂ ಕಮ್ಮಿಯಿಲ್ಲದಂತೆ ಅಭಿವೃದ್ಧಿಪಡಿಸಿದ್ದಾರೆ. ಇದೀಗ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಹೈಟೆಕ್ ಕಂಪ್ಯೂಟರುಗಳನ್ನು ಅಳವಡಿಸಿ ಸುಸಜ್ಜಿತ ಐಟಿ ಕಂಪನಿ ರೀತಿಯಲ್ಲಿ ಲ್ಯಾಬ್ ವ್ಯವಸ್ಥೆ ಕಲ್ಪಿಸಿದ್ದಾರೆ.

ಮೈಕ್ರೋಸಾಫ್ಟ್ ಕಾರ್ಪೊರೇಷನ್ ಇಂಡಿಯಾ ಹಾಗೂ ಉಪ್ಪುಂದ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸಹಯೋಗ:

ಮೈಕ್ರೋಸಾಫ್ಟ್ ಕಾರ್ಪೊರೇಷನ್ ಇಂಡಿಯಾ ಹಾಗೂ ಉಪ್ಪುಂದ ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಬಿಜೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾದ ಕಂಪ್ಯೂಟರ್ ಲ್ಯಾಬ್ ವಿದ್ಯಾರ್ಥಿಗಳ ಹೈಟೆಕ್ ಶಿಕ್ಷಣಕ್ಕೆ ವರದಾನವಾಗಿದೆ. ಈ ಸುಸಜ್ಜಿತ ಕಂಪ್ಯೂಟರ್ ಲ್ಯಾಬನ್ನು ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ಶನಿವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ನೀಡುವ ಇಂತಹ ಕೊಡುಗೆಗಳು ಬಡ ವಿದ್ಯಾರ್ಥಿಗಳ ಕನಸಿನ ಶಿಕ್ಷಣಕ್ಕೆ ದಾರಿದೀಪವಾಗಿದೆ ಎಂದರು. ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ಗೋವಿಂದ ಬಾಬು ಪೂಜಾರಿ ಅವರು ಬಿಜೂರು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಇದೀಗ ಡಿಜಿಟಲ್ ಶಿಕ್ಷಣದ ಮೂಲಕ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲಿದೆ ಎಂದು ಶ್ಲಾಘಿಸಿದರು.

ವರಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ಮುಖ್ಯಸ್ಥ ಡಾ.ಗೋವಿಂದ ಬಾಬು ಪೂಜಾರಿ ಮಾತನಾಡಿ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಶಾಲೆಗೆ ಈಗಾಗಲೇ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅದರ ಫಲವಾಗಿ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಮೈಕ್ರೋಸಾಫ್ಟ್ ಸಹಯೋಗದಲ್ಲಿ ಕಂಪ್ಯೂಟರ್ ಲ್ಯಾಬ್ ಸ್ಥಾಪಿಸಿರುವುದು ವಿದ್ಯಾರ್ಥಿಗಳ ಡಿಜಿಟಲ್ ಕಲಿಕೆಗೆ ನೆರವಾಗಲಿದೆ ಎಂದರು. ಮುಂದೆಯೂ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ನಡೆಯಲಿವೆ ಎಂದರು.

ಇದೇ ವೇಳೆ, ಸಮಾಜಮುಖಿ ಸೇವೆಯಲ್ಲಿ ತೊಡಗಿರುವ ಡಾ.ಗೋವಿಂದ ಬಾಬು ಪೂಜಾರಿ ಅವರನ್ನು ಶಾಸಕ ಗುರುರಾಜ ಗಂಟಿಹೊಳೆ ಅವರು ಅಭಿನಂಧಿಸಿ ಸನ್ಮಾನಿಸಿದರು.

ಈ ಸಮಾರಂಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಮೇಶ್ ವಿ. ದೇವಾಡಿಗ, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಂದೀಶ್ ದೇವಾಡಿಗ, ರಾಜೇಂದ್ರ ಬಿಜೂರು, ಗಿರೀಶ್ ಶ್ಯಾನುಭಾಗ್, ಗಂಗಾಧರ ದೇವಾಡಿಗ, ಅಲಕ ಸುರೇಶ್ ಬಿಜೂರು, ಗೋಪಾಲ ಪೂಜಾರಿ, ಟ್ರಸ್ಟ್ ವ್ಯವಸ್ಥಾಪಕ ನಾಗರಾಜ್ ಪಿ. ಯಡ್ತರೆ, ಮುಖ್ಯ ಶಿಕ್ಷಕ ಮಂಜುನಾಥ ಎಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *