ರಾಜ್ಯದ ಕೆಲವೆಡೆ ಬಿರುಗಾಳಿ ಮಳೆ ಸಾಧ್ಯತೆ; ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ತುಸು ದುರ್ಬಲವಾಗಿದ್ದರೂ, ಮುಂದಿನ ಐದು ದಿನಗಳ ಕಾಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಹಾಗೂ ಕೆಲವೆಡೆ ಬಿರುಗಾಳಿಯ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಗಂಟೆಗೆ 30ರಿಂದ 40 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ನಿರೀಕ್ಷೆ ಇರುವುದರಿಂದ ಮೀನುಗಾರರು ಹಾಗೂ ಸಮುದ್ರ ತೀರ ಪ್ರದೇಶದ ನಿವಾಸಿಗಳು ಎಚ್ಚರಿಕೆ ವಹಿಸುವಂತೆ ಇಲಾಖೆ ಸೂಚಿಸಿದೆ.

ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿಯೂ ಸಾಧಾರಣ ಮಳೆಯಾಗಲಿದ್ದು, ಈ ಭಾಗಗಳಲ್ಲೂ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲೂ ಗಾಳಿ-ಮಳೆಯ ವಾತಾವರಣ ಇರಲಿದೆ. ಧಾರವಾಡ, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
